Saturday, May 22, 2010

ಅನಂತ ವೇದನೆಯ ರಾಣಿ-೬

ಮೇಡಮ್:

ಇತ್ತೀಚೆಗೆ ಸುಚಿತ್ರ ನನ್ನೊಡನೆ ಸರಿಯಾಗಿ ಮಾತಾಡುತ್ತಿಲ್ಲ, ಪ್ರಭಂದಕ್ಕೆ ಅವಳು ಸೂಚಿಸಿದ ಶೀರ್ಷಿಕೆಯನ್ನು ನಾನು ಒಪ್ಪಿರದ ಕಾರಣಕ್ಕೇ ಇರಬೇಕು. ನಾನಾದರೂ ಏನು ಮಾಡಲಿ? ರಾಣಿ ಸಂಪೂರ್ಣ ಸುಖಿಯಾಗಿದ್ದಳು ಅನ್ನಲಾರೆ ಆದರೆ ‘ಅನಂತ ವೇದನೆಯ ರಾಣಿ’ ಎಂದವಳನ್ನು ಸಂಭೋದಿಸಿ ಅವಳಿಗೆ ಸಂಭಂದಪಟ್ಟ ಪ್ರಭಂದಕ್ಕೆ ಅನ್ಯಾಯ ಮಾಡಿದಹಾಗಾಗುತ್ತದೆ ಎಂದು ನನ್ನನಿಸಿಕೆ. ನಿಯತಿ ರಾಣಿಯ ಸೆರಗಿನಲ್ಲಿ ದುಖಃವನ್ನೇ ಸುರಿದಿದೆ ಅನ್ನುವುದು ಸುಚಿತ್ರಾಳ ಅಭಿಪ್ರಾಯ, ಅವಳ ನಿಷ್ಕರ್ಶೆ ತಪ್ಪು, ತನ್ನ ತಪ್ಪುಗಳನ್ನು ಸುಧಾರಿಸಿಕೊಳ್ಳುವ ಅನೇಕ ಅವಕಾಶಗಳು ರಾಣಿಗೆ ಸಿಕ್ಕಿದ್ದವು, ಆಕೆಯ ತಾಯಿಯ ಚಾಣಾಕ್ಷ ಸೂಚನೆಗಳು ಅವಳಿಗೆ ಆಗ್ಗಿಂದಾಗ್ಗೆ ಸಿಗುತ್ತಿದ್ದವು, ಲೂಯಿಯ ಬೆಂಬಲದಿಂದ ರಾಜ್ಯಕ್ಕೆ ವಾರಸುದಾರ ಸಿಕ್ಕಮೇಲಂತೂ ಪ್ರಜೆಗಳಿಗೆ ರಾಣಿಯ ಮೇಲಿನ ಅಸಂತೋಷ ಕಡಿಮೆಯಾಗಿ ಅವಳ ಎಲ್ಲ ಅಪರಾಧಗಳನ್ನವರು ಕ್ಷಮಿಸಿದ್ದರು. ಆಗಲಾದರೂ ರಾಣಿ ಪರಿಸ್ಥಿಯನ್ನು ಅರ್ಥಮಾಡಿಕೊಂಡು ತ್ರಿಯೋನಾದ ಅರಮನೆ, ನಾಟ್ಯಗೃಹ, ಹಾಗೂ ಆ ಪಾರ್ಟಿಗಳನ್ನು ಬಿಟ್ಟು ಫ಼್ರಾನ್ಸಿಗೆ ಮರಳಿ ಬರಬೇಕಿತ್ತು. ಆದರೆ ರಾಣಿ ಅಕ್ಕಪಕ್ಕದ ಪರಿಸರ ಕ್ಷಣಕ್ಷಣಕ್ಕೂ ಸ್ಫೋಟಕವಾಗುತ್ತಿದೆ ಅನ್ನುವ ಕಲ್ಪನೆಯೂ ಇರದಷ್ಟು ತನ್ನದೇ ಕಲ್ಪನಾ ಲೋಕದಲ್ಲೇ ವಿಹರಿಸುತ್ತಿದ್ದಳು.

ಇಲ್ಲಿ ರಾಣಿಯ ವ್ಯಕ್ತಿತ್ವವನ್ನು ಪರಿಗಣಿಸುವುದರ ಜೊತೆಗೆ ಫ಼್ರಾನ್ಸಿನ ಐತಿಹಾಸಿಕ ಪಾರ್ಶ್ವಭೂಮಿಯನ್ನೂ ಅಭ್ಯಸಿಸುವುದು ಮುಖ್ಯವಾಗಿದೆ.
ವರ್ಷಾನುವರ್ಷ ವಸಾಹತುಗಳ ಮೇಲೆ ರಾಜ್ಯವನ್ನಾಳುತ್ತ ನಿಸರ್ಗ ತನ್ನ ಮುಕ್ತ ಹಸ್ತದಿಂದ ಚೆಲ್ಲಿದ ಸೌಂದರ್ಯವನ್ನು ಬಳಸುತ್ತ ಯುರೋಪಿನಲ್ಲಿ ಇಂಗ್ಲೆಂಡಿನಷ್ಟೆ ಫ಼್ರನ್ಸ ಕೂಡ ಮಹಾಸತ್ತೆಯಾಗಿ ಪರಿಣಮಿಸಿತ್ತು. ಆರ್ಥಿಕ ಹಾಗೂ ಸಾಂಸ್ಕೃತಿಕ ಪರಂಪರೆ ಲಭಿಸಿದ ಈ ದೇಶ ಇತರ ದೇಶಗಳಿಗೆ ಆದರ್ಶ ಕೂಡ. ದೇಶವಿದೇಶದ ರಾಜಪುತ್ರರಿಗೆ ಇತರ ವಿದ್ಯೆಯೊಂದಿಗೆ ಫ಼್ರೆಂಚ್ ಭಾಷೆ ಕಲಿಯಲೇ ಬೇಕೆನ್ನುವ ಕಾನೂನಿದ್ದ ದಿನಗಳವು. ಇಂಗ್ಲೆಂಡ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಇದು ಇವರ ಪೂರ್ವಜರ ಸಾಧನೆ. ಮುಂದಿನ ಪೀಳಿಗೆಯವರು ಈ ಸಾಧನೆಯನ್ನು, ಪರಂಪರೆಯನ್ನು ಮುಂದುವರೆಸಿಕೊಂಡು ಹೋದರೆ ಹಣ, ಅಧಿಕಾರ ಕೈಯಲ್ಲಿರಲು ಸಾಧ್ಯ. ಆದರೆ ದುರ್ದೈವವಶಾತ್ ಹಾಗಾಗದೆ ಮುಂದಿನ ಪೀಳಿಗೆಯ ರಾಜರು ಐಶಾರಾಮದ ಜೀವನ ತಮ್ಮದಾಗಿಸಿಕೊಂಡರು. ಲೂಯಿ ಕೂಡ ಇವರಲ್ಲೊಬ್ಬ. ಜನಹಿತಕ್ಕಿಂತ ಸ್ವಹಿತಕ್ಕೆ ಪ್ರಾಮುಖ್ಯತೆ ಕೊಟ್ಟು ನಿಯೋಜನೆಯ ಅಭಾವ ಹಾಗೂ ಬೇಕಾಬಿಟ್ಟಿ ಕರಗಳನ್ನು ಹೇರಿದ್ದರಿಂದ ಫ಼್ರಾನ್ಸ ಅವನತಿಯತ್ತ ಹೆಜ್ಜೆಯಿಡತೊಡಗಿತು. ರಾಣಿಯ ಕಾಲದಲ್ಲಂತೂ ಫ಼್ರಾನ್ಸನ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ನೆಲ ಕಚ್ಚುವಂತಾಯಿತು. ರೈತರು, ಕಾರ್ಮಿಕರು ಬುದ್ಧಿ ಜೀವಿಗಳು ಕರಗಳನ್ನು ತುಂಬುತ್ತ ಹೋದಂತೆ ಇತ್ತ ರಾಜ ಪರಿವಾರ ಹಾಗೂ ಮೇಲ್ವರ್ಗದ ಧರ್ಮಗುರು ಹಾಗೂ ಶ್ರೀಮಾಂತ ಉಮರಾವ್‌ಗಳು ವಿಲಾಸದಲ್ಲಿ ಮಗ್ನರಾದರು. ಫ಼್ರೆಂಚ್ ಜನತೆಗಂತೂ ಕಷ್ಟ ಪಟ್ಟು ದುಡಿಯುವ ಅಭ್ಯಾಸವಿದ್ದೇಯಿತು. ಈ ಪರಿಸ್ಥಿಯಲ್ಲಿ ವಿಲಕ್ಷಣ ಬುದ್ಧಿಮತ್ತೆಯಿದ್ದ ರೂಸೋ ಹಾಗೂ ವ್ಹಾಲ್ಟೋರಂತಹ ವೈಚಾರಿಕ ರಾಜಕಾರಣಿಗಳು ಎಚ್ಚೆತ್ತುಕೊಂಡು ಜನತೆಯನ್ನು ಎಚ್ಚರಿಸಲಾರಂಭಿಸಿದರು. ಇವರೀರ್ವರ ಎದುರು ಅಮೇರಿಕಾದ ರಾಜ್ಯಕ್ರಾಂತಿಯ ಯಶಸ್ಸಿನ ಉದಾಹರಣೆಯಿತ್ತು. ದೇಶದ ಏಳಿಗೆ ರಾಜನ ಪೂಜೆ ಮಾಡುವುದರಿಂದಾಗದೆ ಸ್ವಾತಂತ್ರ್ಯ, ಸಮತಾ ಹಾವ ಹಾಗೂ ಬಂಧುತ್ವ ಅನ್ನುವ ಮೂರು ತತ್ವಗಳಿಂದಾಗುತ್ತದೆ ಆನುವುದನ್ನವರು ಜನರ ಮನಸ್ಸಿನಲ್ಲಿ ಬಿಂಬಿಸಿದರು. ತಮ್ಮ ಪಕ್ಕದ ರಾಜ್ಯವಾದ ಇಂಗ್ಲೆಂಡ್‌ನ ಜನರ ಸುಂದರ ಚಿತ್ರವನ್ನು ಮನಸ್ಸಿನಲ್ಲಿಟ್ಟು ಮಾನವನಿಗೆ ಮಾನವನಾಗಿ ಬದುಕಲು ಅವಕಾಶ ಕೊಡುವ ಲೋಕಶಾಹಿಯನ್ನು ಫ಼್ರಾನ್ಸನಲ್ಲಿ ತರಲು ಅವರು ಕಟಿಬದ್ದರಾದರು. ಇದೇ ಕಾಲದಲ್ಲಿ ಫ಼್ರೆಂಚ್ ಸಾಮ್ರಾಜ್ಯದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳುವ ಸುವರ್ಣಾವಕಾಶ ರಾಣಿಗೆ ಸಿಕ್ಕಿತ್ತು, ಆಕೆಯ ತಾಯಿಯಂತೆ ಆಕೆ ಕೂಡ ತನ್ನ ರಾಜ್ಯದ ವಹಿವಾಟನ್ನು ವಹಿಸಿಕೊಳ್ಳಲಿ ಅನ್ನುವುದನ್ನು ಜನತೆ ಬಯಸಿತ್ತು. ಕಡೆಗೊಂದು ದಿನ ತನ್ನ ಹಿತಚಿಂತಕರ ಸೂಚನೆಯಂತೆ ಆಕೆ ರಾಜ್ಯಸಭೆಯ ಕಾರ್ಯಕಲಾಪಗಳಲ್ಲಿ ಹಾಜರಿರಲು ಪ್ರಾಂಭಿಸಿದಳಾದರೂ ತನ್ನ ಮರ್ಜಿಯಲ್ಲಿದ್ದವರಿಗೆ ಅವರಿಚ್ಛೆಯಂತೆ ರಾಜ್ಯದ ಕೆಲವು ಮುಖ್ಯ ಹುದ್ದೆಗಳನ್ನು ಹಂಚಿ ದೊಡ್ಡ ತಪ್ಪು ಮಾಡಿದಳು. ಇದು ಫ಼್ರನ್ಸ ವಿನಾಶದ ದೆಸೆಯಲ್ಲಿ ಇಟ್ಟ ಮೊದಲ ಹೆಜ್ಜೆ. ಇದರಿಂದ ನಿಜವಾಗಿಯೂ ಕಳಕಳಿಯಿಂದ ಜನತೆಯನ್ನು ಪ್ರತಿನಿಧಿಸುವ ಕಾರ್ಯಕರ್ತರು ಪಕ್ಕಕ್ಕೆ ತಳ್ಳಲ್ಪಟ್ಟರು.
ಕೆಲವೇ ದಿನಗಳಲ್ಲಿ ಕಷ್ಟಪಟ್ಟು ಬೆವರು ಸುರಿಸುವ ಜನತೆಗೆ ನಮ್ಮ ರಾಜ ಮೂರ್ಖ, ರಾಣಿ ವಿಲಾಸಿನಿ, ಈ ರಾಷ್ಟ್ರ ಸಾಲದ ಹೊರೆಯಡಿಯಿದ್ದರೂ ಅರಮನೆಯಲ್ಲಿ ಬಣ್ಣಬಣ್ಣದ ಪಾರ್ಟಿಗಳು ನಡೆಯುತ್ತಿವೆ ಅನ್ನುವ ಸೂಕ್ಷ ವಿಷಯಗಳು ಅರ್ಥವಾಗತೊಡಗಿದವು. ಇದೇ ಕಾಲದಲ್ಲಿ ರಾಣಿ ತನ್ನ ತಮ್ಮ ಜೋಸೆಫ಼್ ನ ಕಷ್ಟ ಸಮಯದಲ್ಲಿ ಸಹಾಯ ಮಾಡಲು ಲಕ್ಷಕ್ಕೂ ಅಧಿಕ ಬೆಲೆಯುಳ್ಳ ಚಿನ್ನದ ನಾಣ್ಯಗಳನ್ನು ಗುಪ್ತ ಮಾರ್ಗವಾಗಿ ಆಸ್ಟ್ರೀಯಾಗೆ ಕಳಿಸಿದಳು. ಇದರಿಂದ ಕಾಮಾಂಧ ಹಾಗೂ ವ್ಯಸನಾಧೀನಳಾದ ರಾಣಿಯ ಕಿರೀಟದಲ್ಲಿ ದೇಶದ್ರೋಹದ ಗರಿಯನ್ನೂ ಅಳವಡಿಸಲಾಯಿತು. ದಿನೇ ದಿನೇ ಜನತೆಯ ಮನಸ್ಸಿನಲ್ಲಿ ಸಂತೋಷ ಹೊಗೆಯಾಡಲಾರಂಭಿಸಿತ್ತು. ಅಮೇರಿಕಾದಿಂದ ಮರಳಿದ ಫ಼್ರಾನ್ಸಿನ ರಾಜಕಾರಣಿಗಳು ವಿಭಿನ್ನವಾದ ಎಂದೂ ಕೇಳಿರದ ವಾರ್ತೆಗಳನ್ನು ತಂದಿದ್ದರು. ‘ಅಮೇರಿಕಾದಲ್ಲಿ ರಾಜಾ-ರಾಣಿಯರೇ ಇಲ್ಲವಂತೆ, ಶ್ರೀಮಂತರೂಯಿಲ್ಲ., ಉಮರಾವ್‌ರೂ ಇಲ್ಲ, ಧರ್ಮಗುರುಗಳ ವರ್ಚಸ್ಸಿಲ್ಲ, ಅಲ್ಲಿ ಕೇವಲ ನಾಗರೀಕರಿರುತ್ತಾರೆ,ಅವರು ಕಷ್ಟಪಟ್ಟು ದುಡಿದದ್ದನ್ನು ತಮಗಾಗಿ ಹಾಗೂ ಸಮಾಜಕ್ಕಾಗಿ ಉಪಯೋಗಿಸುತ್ತಾರೆ, ಅಲ್ಲಿಯೂ ಬಡತನವಿದೆ ಆದರೆ ಜನ ಸುಖವಾಗಿ ತಿಂದುಂಡು ಸ್ವತಂತ್ರವಾಗಿದ್ದಾರೆ, ಅವರ ಬೆವರಿಗೆ ಸುಗಂಧವಿದೆ, ಅವರ ಕಷ್ಟಕ್ಕೆ ಬೆಲೆಯಿದೆ’ ಅನ್ನುವ ಅನೇಕ ವಿಷಯಗಳು ಫ಼್ರಾನ್ಸನ ಜನತೆಯ ಕಿವಿ ತಲುಪುತ್ತಿದ್ದವು. ‘ಡಿಗ್ನಿಟಿ ಆಫ಼್ ಲೇಬರ್’ ನ ಪರಿಕಲ್ಪನೆ ಪ್ರಪ್ರಥಮವಾಗಿ ಫ಼್ರಾನ್ಸ ಜನತೆಯ ಮನಸ್ಸು ತಟ್ಟಿತು. ರೂಸೋ ತನ್ನ ಸೋಷಿಯಲ್ ಕಾಂಟ್ರಾಕ್ಟನಿಂದ ಅದನ್ನು ತುಂಬ ಪ್ರಭಾವಶಾಲಿಯಾಗಿ ಎತ್ತಿ ಹಿಡಿದ. ರಾಜಾ ರಾಣಿಯರ ಹುದ್ದೆಯ ಅಸ್ತಿತ್ವವನ್ನು ಮೊದಲ ಬಾರಿಗೆ ವಿರೋಧಿಸಲಾಯಿತು. ಜನತೆಯ ಪ್ರತಿನಿಧಿತ್ವವನ್ನು ಸ್ವಿಕರಿಸಿದ `ನ್ಯಾಷನಲ್ ಅಸೆಂಬ್ಲಿಯ' ಕೆಲಸಗಳು ದಿನೇದಿನೇ ಆಕ್ರಮವಾಗುತ್ತ ಹೋದರೂ ರಾಣಿಗೆ ಇದ್ಯಾವುದರ ಸುಳಿವು ಕೂಡ ಇರಲಿಲ್ಲ. ದೀರ್ಘ ನಿದ್ದೆಯಲ್ಲಿರುವ ಭೂಮಿಗತ ಕಪ್ಪೆ ಕೂಡ ಮಳೆಯ ಆಗಮನದ ಸೂಚನೆಯನ್ನು ಗುರುತಿಸಿ ಭೂಮಿಯ ಮೇಲೆ ಬರುತ್ತದೆ ಅದರೆ ರಾಣಿ ಮಾತ್ರ ರಾತ್ರಿ ಹತ್ತರ ನಂತರ ಯಾವುದೇ ಪತ್ರಗಳನ್ನು ಅಥವಾ ಸಂದೇಶಗಳನ್ನು ದೂತರು ಒಳಗೆ ತರುವಂತಿಲ್ಲ ಅನ್ನುವ ಕಟ್ಟಪ್ಪಣೆಯನ್ನು ಹೊರಡಿಸಿದ್ದಳು. ಕ್ರಾಂತಿಕಾರರು ಬ್ಯಾಸಿಲ್‌ನ ಕೋಟೆಯನ್ನು ವಶಪಡಿಸಿಕೊಂಡು ಅಲ್ಲಿಯ ಸರದಾರನ ತಲೆ ತುಂಡರಿಸಿ ಅದನ್ನು ಪ್ಯಾರಿಸ್‌ನ ಗಲ್ಲಿಗಲ್ಲಿಗಳಲ್ಲಿ ವಿಜಯ ಪತಾಕೆಯಂತೆ ಮೆರವಣಿಗೆ ಮಾಡಿದರೂ ಈ ವಾರ್ತೆ ತರುವ ದೂತರು ಮಾತ್ರ ಅರಮನೆಯ ಹೊರಗೆ ಬೆಳಗಾಗುವ ಪ್ರತೀಷೆಯಲ್ಲಿ ನಿಂತಿದ್ದರು. ಎಷ್ಟು ನಾಚಿಕೆಗೇಡುತನ. ಇಷ್ಟೆಲ್ಲ ನಡೆದರೂ ರಾಣಿ ಮಾತ್ರ ತನ್ನದೇ ಇನ್ಸ್ಟಿಂಕ್ಟ ಮೇಲೆ ಅವಲಂಬಿತಳಾಗಿದ್ದಳು. ಜನ್ಮದಿಂದ ಅಥವಾ ಕರ್ಮದಿಂದ ಸಿಗದ ಆದರೆ ಕೇವಲ ಹಣೇಬರಹದಿಂದ ಸಿಕ್ಕಿದ್ದ ರಾಣಿತ್ವದ ಮೇಲೆ ತಳಊರಿದ್ದಳು. ಕ್ರಾಂತಿ, ಮಾನವೀಯ ಹಕ್ಕು, ಲೇಖನ ಸ್ವಾತಂತ್ರ್ಯ, ಈ ಶಬ್ದಗಳನ್ನಾಕೆ ಎಂದೂ ಕೇಳಿರಲೇಯಿಲ್ಲ. ನಾನು ಆಸ್ಟ್ರಿಯನ್ ಆದ್ದರಿಂದ ನನ್ನನ್ನು ದ್ವೇಶಿಸುತ್ತಿರುವ ಇವರು ತಲೆಹಿಡುಕರು ಅನ್ನುವ ದೃಷ್ಟಿಯಿಂದಲೇ ಆಕೆ ಕ್ರಾಂತಿಕಾರರನ್ನು ಕಂಡಳು. ಅವಳಂದುಕೊಂಡಂತೆ ಈ ವರ್ಗ ಅಷ್ಟು ತಲೆಹಿಡುಕು ಅಥವಾ ಧೈರ್ಯಹೀನವಾಗಿರಲಿಲ್ಲ, ಬಡವರಾಗಿದ್ದರೂ ಸತ್ವಹೀನರಾಗಿರಲಿಲ್ಲ, ಅವರ ಪ್ರತಿನಿಧಿಗಳು ಬುದ್ಧಿವಂತರೂ ಮುತ್ಸದ್ದಿಗಳೂ ಆಗಿದ್ದರು. ಮಿರಾಬೋ, ಲಾಫ಼ಾಯತ್, ಲುತ್ಸಾಲೋ, ಮೋರಾ ಇವರುಗಳು ಕಾರ್ಯಕರ್ತರಲ್ಲಿ ಮುಖ್ಯರು.
ಮುಂದೆ ಈ ಕ್ರಾಂತಿಯನ್ನು ಮಟ್ಟ ಹಾಕಲು ರಾಣಿ ಸಾಕಷ್ಟು ನಿಕೃಷ್ಟವಾದ ಕೆಲಸ ಮಾಡಿದಳು. ಕ್ರಾಂತಿಕಾರರನ್ನು ತೊಲಗಿಸಲು ರಾಣಿ ಹೊರದೇಶದಿಂದ ಸೈನ್ಯ ತರಿಸಿ ಅವರ ಹೊಟ್ಟೆ ಪಾಡಿಗಾಗಿ ನೀರಿನಂತೆ ಹಣ ಖರ್ಚು ಮಾಡಿದಳು. ದೇಶದಲ್ಲಿ ಜೀವನಾವಶ್ಯಕ ವಸ್ತುಗಳು ಕಾಣೆಯಾಗುತ್ತಿದ್ದುವಾದರೆ ಅರಮನೆಯಲ್ಲಿ ಬಾಡಿಗೆಯ ಸೈನಿಕರಿಗಾಗಿ ಉತ್ತನ ಊಟ, ಸಾರಾಯಿ ಸರಬರಾಜಾಗುತ್ತಿತ್ತು. ಕ್ರಾಂತಿಯನ್ನು ಮಟ್ಟ ಹಾಕಲು ರಾಣಿ ಎಲ್ಲ ತಯಾರಿಯನ್ನು ಪೂರ್ಣಗೊಳೊಸಿದಳು, ರಕ್ತದ ಕಾಲುವೆಯೇ ಹರಿಯಿತು, ಏನೇ ಬಂದರೂ ಸ್ವಾತಂತ್ರ್ಯ ಅಥವಾ ಸಾವು ಅನ್ನುವ ಜಿದ್ದಿನಿಂದ ಸಮಸ್ತ ಫ಼ೆಂಚ್ ಜನತೆ ಟೊಂಕ ಕಟ್ಟಿ ನಿಂತಿತು. ಜನತೆಯ ಕ್ಷೋಭೆಯ ಎದುರು ರಾಜಾ ರಾಣಿಯರಿಗೆ ತಲೆಬಾಗಿಸಲೇ ಬೇಕಾಯಿತು. ಈರ್ವರನ್ನು ಬಂಧಿಸಿ ಪ್ಯಾರಿಸ್‌ನಲ್ಲಿಟ್ಟಾಗ ರಾಣಿ ಅಲ್ಲಿಂದ ಓಡಿ ಹೋಗುವ ಪ್ರಯತ್ನದಲ್ಲಿ ಲಂಚ ಕೊಡಮಾಡಿದಳು. ಹೊರ ದೇಶದ ಶತೃಗಳೊಂದಿಗೆ ಸಂಧಾನ ನಡೆಸಿಯೂ ವಿಫ಼ಲಳಾದಳು. ಇದೆಲ್ಲದರ ಕೊನೆ ಅವಳ ವಧೆಯಲ್ಲಾಯಿತು.
ರಾಜಾ ರಾಣಿಯರ ವಧೆಯಿಂದ ಹುಕುಮಶಾಹಿಯ ಅಂತ್ಯವಾಗಿತ್ತಲ್ಲದೆ ಈ ಕಠೋರ ನಿರ್ಣಯದಲ್ಲಿಯೇ ಫ಼್ರಾನ್ಸಿನ ಭವಿಷ್ಯ ಅವಲಂಬಿಸಿತ್ತು. ಈ ನಿಭಂದದ ನನ್ನ ನಿಲುವು ಯಾವುದೇ ಪಕ್ಷದ ಧೋರಣೆಯಲ್ಲ, ಅದು ವಸ್ತು ಸ್ಥಿಯ ಮೇಲೆ ಬಹುಶಃ ಫ಼್ರಾನ್ಸ ಮಾಡಿದ ಪ್ರಗತಿಯ ಮೇಲೆ ಆಧರಿಸಿದೆ.
(ಮುಂದುವರೆಯುತ್ತದೆ)

Sunday, May 2, 2010

ಅನಂತ ವೇದನೆಯ ರಾಣಿ-೫

ಅನಂತ ವೇದನೆಯ ರಾಣಿ-೫


ರಾಣಿ:


ಇತಿಹಾಸಕರರನ್ನು ದೂಷಿಸಲೆ? ಕೊನೆಯ ಮೂರು ವರ್ಷ ಕಠಿಣ ಶಿಕ್ಡ್ಶೆ ಅನುಭವಿಸುತ್ತಿರುವಾಗ ನನ್ನ ಹೆಸರು ಹಾಗೂ ಸಾಧನೆ ಫ಼್ರಾನ್ಸನ ಇತಿಹಾಸದಲ್ಲಿ ಕಪ್ಪು ಮಸಿಯಲ್ಲಿ ಬರೆಯಲ್ಪಡುತ್ತದೆ ಅನ್ನುವುದು ನನಗೆ ಮನದಟ್ಟಗಿತ್ತಾದರೂ ನಾನು ಅಸಹಾಯಕಳಾಗಿದ್ದೆ. ಏನೂ ಮಾಡುವ ಹಾಗಿರಲಿಲ್ಲ. ನನ್ನ ನಡತೆ, ಕೃತ್ಯ ಹಾಗೇ ಇತ್ತಲ್ಲ, ಬರೀ ಕಪ್ಪು ಕಪ್ಪು. ಸಮಾಜದ ಮೌಲ್ಯಗಳ ವಿರುದ್ಧ ಮಾಡಿದ ಹೇಯ ಕೃತ್ಯಗಳು, ಆದರೆ ಮನಸ್ಸಿನಾಳದಿಂದ ಹೇಳುತ್ತಿದ್ದೇನೆ ನಾನು ಮಾಡಿದ್ದೆಲ್ಲ ಕೇವಲ ‘ಸ್ವಂತ ಸುಖಾಯ’ ಅನ್ನುವ ಭಾವನೆಯಿಂದ ಮಾತ್ರ, ಇತರರಿಗೆ ಉಪದ್ರವ ಕೊಡುವ ಉದ್ದೇಶದಿಂದಲ್ಲ.


ನಮ್ಮ ತ್ರಿಯೋನಾದ ಅರಮನೆಯಲ್ಲಿ ‘ಆರ್ಜಿ’ ಪಾರ್ಟಿಗಳು ನಡೆಯುತ್ತವೆ ಅನ್ನುವ ಅನುಮಾನ ಜನತೆಗಿತ್ತು, ನಿಜವಾಗಿಯೂ ನಾನವುಗಳನ್ನು ಉದ್ದೇಶಪೂರ್ವಕವಾಗಿ ನಡೆಸಲಿಲ್ಲ. ನಾವೆಲ್ಲ ಹಾಡಿ, ಕುಣಿದಾಡಿ ಆನಂದಿಸುತ್ತಿದ್ದೆವು. ಸುಂದರ ಗಟ್ಟಿಮುಟ್ಟಾದ ಪುರುಷರು, ಅವರೊಂದಿಗೆ ಸುಂದರ ತರುಣ ಸ್ತ್ರೀಯರು, ಮಧ್ಯರಾತ್ರಿಯ ಗೂಢ ಚಳಿಯಲ್ಲಿ ಸಂಗೀತದ ಮಂದ ಸ್ವರಗಳ ಮತ್ತೇರುತ್ತಿತ್ತು. ಆ ಒಂದು ಮತ್ತಿನಲ್ಲಿ ಅವರಿಗೂ ಗೊತ್ತಾಗದ ಕ್ಷಣದಲ್ಲಿ ಆರಂಭವಾಗುತ್ತಿತ್ತು ಪ್ರೇಮಿಗಳ ವಿಲಾಸ. ಅಕ್ಕಪಕ್ಕದ ಪರಿಸರ, ಇಡೀ ದಿನದ ಕಷ್ಟ ಆಗ ಮರೆಯಲ್ಪಡುತ್ತಿದ್ದವು. . ಅಲ್ಲಿ ಕೇವಲ ನಮ್ಮ ಪ್ರೀತಿಯ ವ್ಯಕ್ತಿಯ ಸಹವಾಸವಿರುತ್ತಿತ್ತಲ್ಲದೆ ಆ ಕೆಲವೇ ಕ್ಷಣಗಳ ಸುಖ ಹೀರಿ ತೃಪ್ತರಾಗುವ ತುಡಿತ ಕೂಡ ಪ್ರತಿಯೊಬ್ಬರ ಮನಸ್ಸಿನಲ್ಲಿರುತ್ತಿತ್ತು. ಸುಖ ಬಯಸಿ ನಾನು ಅಪರಾಧಿಯಾಗುತ್ತಿದ್ದೇನೆ ಎಂದು ನನಗೆಂದೂ ಅನಿಸಲಿಲ್ಲ. ಮದುವೆಯ ನಂತರ ನಾವು ಗಂಡ ಹೆಂಡತಿ ಸೇರಿ ಸೂರೆಗೊಳ್ಳಬೇಕಿದ್ದ ಸುಖವನ್ನು ಇತರ ಜೋಡಿಗಳು ಅನುಭವಿಸುವುದನ್ನು ನೋಡಿ ನಾಚಿಕೆ ಅಥವಾ ಹಿಂಸೆ ಅನಿಸಲಿಲ್ಲ. ಏಕೆಂದರೆ ಆ ಭಾವನೆ ಎಂದೂ ವಿಕೃತವಾಗಿರಲಿಲ್ಲ. ಮೊದಮೊದಲು ನಾನು ಅನೇಕ ಸುಂದರ ಪುರುಷರಲ್ಲಿ ಆಕರ್ಷಿತಳಾಗುತ್ತಿದ್ದೆ, ಆದರೆ ಉದಯಿಸುತ್ತಿರುವ ಸೂರ್ಯನನ್ನು ನೋಡಿ ರಾತ್ರಿಯೆಲ್ಲ ಕಿಚಗುಡುವ ಕಿಟಕಗಳು ತಮ್ಮ ಅರಚಾಟ ನಿಲ್ಲಿಸಿಬಿಡುವ ಹಾಗೆ ಕೆಲಸ ಮುಗಿದೊಡನೆ ಆ ಕ್ಷುದ್ರ ಜೀವಿಗಳು ನನಗೆ ಬೆನ್ನು ತೋರಿಸಿ ಹೊರಟುಬಿಡುತ್ತಿದ್ದರು. ಅವರ ಮನಸ್ಸು ಶರೀರ ಎರಡು ತೃಪ್ತವಾಗುತ್ತಿದ್ದವಾದರೆ ನಾನು ಮಾತ್ರ ಎಲ್ಲವನ್ನೂ ಪಡೆದೂ ಖಾಲಿಖಾಲಿಯಾಗಿರುತ್ತಿದ್ದೆ. ಆಗ ವಿಚಿತ್ರ ತಳಮಳ, ಗೊಂದಲ ಕಾಡುತ್ತಿತ್ತು, ಹೀಗೆಕೆ? ಇಷ್ಟಪಟ್ಟ ಪುರುಷನ ಜೊತೆ ರಾತ್ರಿಯೆಲ್ಲ ಸುಖಿಸಿಯೂ ನಾನು ಅತೃಪ್ತಳೇಕೆ? ನನಗೆ ತೃಪ್ತಿಯೇ ಇಲ್ಲವೆ? ನನಗೆ ನಿಜವಾಗಿ ಬೇಕಾದ್ದೇನು? ಕೇವಲ ಕಾಮಕ್ರಿಡೆಯೆ? ಅಥವಾ ಇನ್ನೇನಾದರು? ಅನ್ನುವ ಗೊಂದಲದ ಸುಳಿಯಲ್ಲಿದ್ದಗ ಲ್ಯಾಂಬೆಲ್ ನನ್ನ ಜೀವನದಲ್ಲಿ ಪ್ರವೇಶಿಸಿದಳು. ಸ್ವಚ್ಛ, ಸುಂದರ, ಹಾಗೂ ನಾಜೂಕಿನ ಶರೀರದ ಲ್ಯಾಂಬೆಲ್ ನನ್ನ ತಳಮಳವನ್ನು ಕೇಳದೆಯೇ ತಿಳಿದುಕೊಂಡಿದ್ದಳು. ಇತರರ ಹಾಗೆ ನನ್ನಲ್ಲಿದ್ದ ಹಣ, ಅಧಿಕಾರ ಆಕೆಗೆ ಬೇಕಿರಲಿಲ್ಲ, ಅವಳೇ ನಿಜವಾದ ಅರ್ಥದಲ್ಲಿ ನನ್ನನ್ನು ಅರ್ಥಮಾಡಿಕೊಂಡಿದ್ದಳು. ಸುರಿಸಿದಷ್ಟು ಹೆಚ್ಚಾಗುವ ನನ್ನ ಕಣ್ಣಿರನ್ನು ತನ್ನ ಪುಟ್ಟ ಕರವಸ್ತ್ರದಿಂದ ಒರೆಸಿತ್ತಿದ್ದಳು. ಅವಳು ನನ್ನ ತಾಯಿಯಷ್ಟೇಯಲ್ಲ ನನ್ನ ಗೆಳತಿ ಕೂಡ ಹಾಂ....ನನ್ನ ಪ್ರೇಯಸಿ ಕೂಡ ಆಗಿದ್ದವಳು. ನಾನೊಬ್ಬ ಸ್ತ್ರೀಯಾಗಿ ಇನ್ನೊಬ್ಬ ಸ್ತ್ರೀಯಲ್ಲಿ ಆಕರ್ಷಿತಳಾಗುವುದು ಸಮಾಜದ ದೃಷ್ಟಿಯಿಂದ ಒಂದು ಮಹಾಪರಾಧ. ಆದರೆ ನನಗದರಲ್ಲಿ ವಿಪರೀತವೇನೂ ಅನಿಸಲಿಲ್ಲ, ಇಂದಿಗೂ ಅನಿಸುವುದಿಲ್ಲ. ಏಕೆಂದರೆ ಶರೀರಕ್ಕಿಂತ ಆಕೆ ನನ್ನ ಮನಸ್ಸಿಗೆ ಹತ್ತಿರವಾಗಿದ್ದಳು, ನನಗಾಗಿ ಮಿಡಿಯುವ ಒಂದು ಮನಸ್ಸಿದ್ದಿದ್ದೇ ಆದರೆ ಅದು ಲ್ಯಾಂಬೆಲ್‌ಳದ್ದು ಅನ್ನುವ ನಂಬಿಕೆ ನನಗೆ. ಈ ವಿಶ್ವಾಸದ ಭಾವನೆಯೇ ನನಗೆ ಬೇಕಾದದ್ದು. ಸ್ವಚ್ಛ್ಂದವಾಗಿ ಆಡಿಕೊಂಡಿರಬೇಕಾಗಿದ್ದ ವಯಸ್ಸಿನಲ್ಲಿ ಲೈಂಗಿಕ ದೋಷವಿದ್ದ, ಮನಸಿಕ ದುರ್ಬಲನಾಗಿದ್ದ ಒಬ್ಬ ಮನುಷ್ಯನಿಗೆ ನನ್ನನ್ನು ಕಟ್ಟಿದರು, ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ವರ್ಗಾಯಿಸಲ್ಪಡುವ ವಸ್ತುವಿನಂತೆ ನಾನು ಆಸ್ಟ್ರಿಯಾದಿಂದ ಫ಼್ರಾನ್ಸ್‌ಗೆ ವರ್ಗಾಯಿಸಲ್ಪಟ್ಟೆ, ಭಾಷೆಯೇ ಗೊತ್ತಿರದ ಸಂಸ್ಕೃತಿಯ ಅರಿವಿಲ್ಲದ ಒಂದು ಬೇರೆಯೇ ಸಮಾಜದಲ್ಲಿ ಬಂದು ಸೇರಿದಾಗ ಅಸುರಕ್ಷಿತತೆಯ ಭಾವನೆ ತೀವ್ರವಾಗಿ ಕಾಡುತ್ತಿತ್ತು. ಅಂತಹ ಸಮಯದಲ್ಲಿ ಸ್ವಲ್ಪ ಪ್ರೀತಿಯಿಂದ ಮಾತನಾಡುವ ಪ್ರತಿಯೊಬ್ಬ ಗಂಡಸಿಗೆ ನಾನು ಸ್ವಾಧೀನಳಾಗುತ್ತಿದ್ದೆ. ಲ್ಯ್ಂಬೆಲ್ ಮಾತ್ರ ನನ್ನೊಂದಿಗೆ ಪ್ರಾಮಾಣಿಕವಾಗಿದ್ದಳು. ನಮ್ಮಿಬ್ಬರ ಈ ಸಂಭಂದ ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಾಗಲಿಲ್ಲ, ಸಾಧ್ಯವಿದ್ದರೂ ನಾನದನ್ನು ಮುಚ್ಚಿಡಲಿಲ್ಲ. ನನಗೆಂದು ಅದರ ಪಶ್ಚ್ಛಾತ್ತಾಪವಿಲ್ಲ, ನಾನು ಮಾಡಿದ್ದು ಪಾಪವೇ ಆಗಿರಬಹುದು ಆದರೆ ನಾನದನ್ನು ಕದ್ದುಮುಚ್ಚಿ ಮಾಡಲಿಲ್ಲ. ಈ ಕೃತ್ಯವನ್ನು ನಾನೆಂದೂ ಹೊಗಳಿಕೊಳ್ಳಲಿಲ್ಲ ಕೂಡ. ನಾನಿದ್ದ ಬಂದಿಸ್ತ ವಾತಾವರಣದಲ್ಲಿ ಶುಭ್ರ ಮುಕ್ತ ಗಾಳಿಗಾಗಿ ನಾನು ತೆಗೆದುಕೊಂಡ ಉಸಿರಾಗಿತ್ತದು. ಇದೇ ನನಗೂ ಪಾಪಕ್ಕೂ ಇದ್ದ ಸಂಬಂಧ.

ವರ್ಸಾಯದ ಅರಮನೆಯಲ್ಲಿ ನನ್ನ ಕೊದಲ ಕೆಲವು ದಿನಗಳು ಬಹಳ ನೀರಸವಾಗಿ ಕಳೆದವು. ಸೂರ್ಯೋದಯಕ್ಕೆ ಮೊದಲು ಎದ್ದು ರಾಜಮನೆತನದ ವೃದ್ಧ ಸ್ತ್ರೀಯರು ಹಾಗೂ ದಾಸಿತರೊಡನೆ ಚರ್ಚಗೆ ಹೋಗುವುದು, ಮಧ್ಯಾಹ್ನ ಹೊಲಿಗೆ ಾಡುವುದು ಇಲ್ಲವೆ ಧಾರ್ಮಿಕ ಗ್ರಂಥಗಳನ್ನು ಓದುವುದು, ಸಾಯಂಕಾಲ ಹೊಸ ಸೊಸೆಯನ್ನು ನೋಡಲು ಬರುವ ಅನೇಕ ಅಪರಿಚಿತರೆದುರು ಕುಳಿತುಕೊಳ್ಳುವುದು, ರಾತ್ರಿ ದಿಂಬಿಗೂ ತನಗೂ ಸಾಮ್ಯವಿದ್ದಂತೆ ಮಲಗುತ್ತಿದ್ದ ನನ್ನ ನಿಷ್ಕ್ರೀಯ ಪತಿಯನ್ನು ನೋಡಿ ಕಣ್ಣಿರು ಸುರಿಸುವುದು, ಇದೇ ನನ್ನ ಕೆಲಸ. ಸೂರ್ಯಾಸ್ತದ ಸಮಯದಲ್ಲಿ ಸಾವಿರುಗಟ್ಟಲೆ ಕಿಟಕಿಗಳಿದ್ದ ವರ್ಸಾಯದ ಅರಮನೆಯಲ್ಲಿ ನಿಶಃಬ್ದ ಬದುಕು ಬಾಳಬೇಕಾಗಿ ಬಂದಾಗ ಶೃಂಗಾರ ಮಾಡಿಕೊಂಡು ನಿಂತಿರುವ ಈ ರಾಣಿ ಯಾರೋ ಪರಸ್ತ್ರೀ, ಪರಿಚಯವಿಲ್ಲದ ಹೆಣ್ಣು ಅನಿಸಿ ಜೀವ ಹೆದರಿ ಹೋಗುತ್ತಿತ್ತು. ಕೈಯಲ್ಲಿ ಅಮ್ಮನ ಪತ್ರಗಳಿರುತ್ತಿದ್ದವು. ಅದರಲ್ಲೇನಿರುತ್ತಿರಲಿಲ್ಲ? ಸಾವಿರ ಸೂಚನೆಗಳ ಪಟ್ಟಿಯೇ ಅಲ್ಲಿರುತ್ತಿತ್ತು. ರಾಜಮನೆತನದ ಮತ್ಸರದ ಬಗ್ಗೆ, ಸಂಕುಚಿತ ಭಾವನೆಯುಳ್ಳ ಸ್ತ್ರೀಯರನ್ನು ನನ್ನ ಬಾಳಿನಿಂದ ತೆಗೆದು ಹಾಕುವ ಸೂಚನೆ, ಶೃಂಗಾರ ಚೇಷ್ಟೆಗಳ ಮಾಹಿತಿ, ಯಾಕಾಗಿ ಇದೆಲ್ಲ ಅನಿಸುತ್ತಿತ್ತು. ತನ್ನ ಸ್ವಾರ್ಥಕ್ಕಾಗಿ ನನ್ನನ್ನು ಕೊಳಚೆಯಲ್ಲಿ ತಳ್ಳಿದ ತಾಯಿಯ ಈ ಆಟ ನನಗೀಗ ಸಹಿಸಲಸಾಧ್ಯವಾಗಿತ್ತು. ಒಮ್ಮೊಮ್ಮೆಯಂತೂ ಆಕೆ ನನ್ನ ಮೇಲೊಂದು ಕಣ್ಣಿಟ್ಟು ತನ್ನ ಕುತಂತ್ರದಿಂದ ನನ್ನನ್ನು ಕುಣಿಸಿ ಫ಼್ರಾನ್ಸನ್ನು ತನ್ನ ಆಧಿಪತ್ಯದಲ್ಲಿ ಸೇರಿಸಿಕೊಳ್ಳಲು ಹವಣಿಸುತ್ತಿದ್ದಾಳೆಯೆ? ಅನಿಸುತ್ತಿತ್ತು. ಎಲ್ಲ ಗೊತ್ತಿದ್ದೂ ನಾನು ಅಸಹಾಯಕಳಾಗಿದ್ದೆ. ನನ್ನ ಗಂಡನೇ ಶಕ್ತಿಹೀನನಾಗಿರುವಾಗ ನಾನ್ಯಾವ ಮೂಲೆ?
ಕಡೆಗೂ ಏಳು ವರ್ಷದ ಕಠಿಣ ತಪ್ಪಸಿನ ಫ಼ಲವೆಂಬಂತೆ ಲೂಯಿ ಶಸ್ತ್ರಕ್ರಿಯೆಗೆ ತಯಾರಾದಾಗ ನನ್ನ ಮಾತೃತ್ವದ ಮಾರ್ಗವೂ ತೆರೆಯಿತು. ೨೨ ನೆಯ ಆಕ್ಟೋಬರ್ ೧೭೮೧ ರಲ್ಲಿ ನನ್ನ ಚೊಚ್ಚಿಲ ಮಗ ರಾಜಮನೆತನದ ವಾರಸುದಾರ ‘ಏಫ಼ಿನ್’ ಜನನವಾಯಿತು. ಆ ದಿನ ದಿನವೆಲ್ಲ ಚರ್ಚಿನಲ್ಲಿ ಘಂಟಾನಾದವಾಯಿತು, ರೈತರಿಗೆ ಸಾಲ ಮನ್ನಾ ಮಾಡಲಾಯಿತು, ಕೈದಿಗಳು ಮುಕ್ತರಾದರು. ಸುಖವೆಂಬ ರಾಜ್ಯದಲ್ಲಿ ನನ್ನ ಹೆಸರೂ ಸೇರಿಸಲ್ಪಟ್ಟಿತು. ೧೭೮೫ ರಲ್ಲಿ ಎರಡನೆಯ ಮಗ ಹಾಗೂ ಅವನ ಹಿಂದಿಂದೆ ಮಗಳು ಜನಿಸಿದಳು.
ಕಳೆದ ಏಳು ವರ್ಷಗಳಿಂದ ಹಗಲು ರಾತ್ರಿ ಒಂದೇ ರೀತಿ ಕಳೆದ ನನ್ನ ಬಣ್ಣದ ಜೀವನ ಕಡೆಗೆ ಮಾತೃತ್ವಕ್ಕೆ ಸಮರ್ಪಿತವಾಯಿತು.
(ಮುಂದುವರೆಯುವುದು)