Thursday, June 10, 2010

ಅನಂತ ವೇದನೆಯ ರಾಣಿ-೭

ರಾಣಿ:

ಫ಼ರ್‌ಸಾನ್! ಫ಼ರ್ಸಾನ್!.... ಈ ಗಾಢಾಂಧಕಾರ ಕೋಣೆಯಲ್ಲಿ ನನ್ನ ಧ್ವನಿ ಪ್ರತಿಧ್ವನಿಸಿ ದೈತ್ಯನ ಹಾಗೆ ನನ್ನ ಮೇಲೆ ದಾಳಿ ನಡೆಸುತ್ತಿರುವಂತಿದೆ. ಮಧ್ಯರಾತ್ರಿ ಫ಼ರ್‌ಸಾನ್‌ನ ಹೆಸರು ಕೂಗುತ್ತ ಹೆದರಿ ಏಳುವುದು ಇದು ನಾಲ್ಕನೆಯ ಸಲ. ಅವನ ನೆನಪು ತುಂಬ ಕಾಡುತ್ತಿದೆ. ಎಲ್ಲಿರಬಹುದು ಅವನು? ಏನು ಮಾಡುತ್ತಿರಬಹುದು? ಈಗಷ್ಟೆ ಕನಸಿನಲ್ಲಿ ಕಾಣಿಸಿಕೊಂಡಿದ್ದನಲ್ಲವೆ? ಅವನ ಕೈಯಲ್ಲಿದ್ದ ವಜ್ರದ ಹಾರವನ್ನು ಕಂಡೆ. ನಿನ್ನೆ ಸಾಯಂಕಾಲವೇ ಜೈಲಿನ ಅಧಿಕಾರಿಗಳು ನನ್ನ ಮೈಮೇಲಿರುವ ಅಳಿದುಳಿದ ಆಭರಣಗಳನ್ನೂ ಕಳಚಿಕೊಂಡು ಹೋದರು. ಈ ಕಲ್ಲಿನ ಕೊಠಡಿಯಲ್ಲಿ ರವಾನಿಸಲ್ಪಟ್ಟ ಮಹತ್ವದ ಅಪರಾಧಿ ನಾನು. ತನ್ನ ಯಾವುದೇ ವ್ಯಯಕ್ತಿಕ ವಸ್ತುಗಳನ್ನು ತನ್ನ ಬಳಿ ಇಟ್ಟುಕೊಳ್ಳುವ ಹಕ್ಕಿಲ್ಲದವಳು. ನನ್ನಲ್ಲಿದ್ದ ವಜ್ರ ವೈಡೂರ್ಯಗಳನ್ನವರು ಎಂದೋ ಲೂಟಿ ಮಾಡಿದ್ದರು. ಕತ್ತಿನಲ್ಲಿದ್ದ ಚಿನ್ನದ ಚೈನ್ ಇದ್ದ ಗಡಿಯಾರ, ಅಮ್ಮ ಕೊಟ್ಟಿದ್ದು ಅದು. ಕೈಬೆರಳಲ್ಲಿದ್ದ ನಾಜೂಕಿನ ಮಾಣಿಕ್ಯದ ಉಂಗುರ, ಕಿವಿಯ ಓಲೆಗಳು ಇವೆಲ್ಲವುಗಳ ಮೇಲಿಂದ ನಾನು ನೀರು ಬಿಡಬೇಕಾಯಿತು. ಆಭೂಷಣಗಳಿಲ್ಲದೆ ಎಲ್ಲ ಖಾಲಿಖಾಲಿ ಅನಿಸಿದರೂ ಹಗುರವೆನಿಸುತ್ತಿದೆ.

ಯೌವ್ವನದ ಹೊಸ್ತಿಲಿನಲ್ಲಿದ್ದಾಗ ನಾನು ಒಡವೆಗಳ ಹುಚ್ಚಿಯಾಗಿದ್ದೆ. ಆದರೆ ಫ಼ರ್‌ಸಾನ್ ಕೊಟ್ಟ ವಜ್ರದ ಸಪ್ತರ್ಷಿ ಸರದ ಬೆಲೆ ಯಾವುದಕ್ಕೂ ಸಮಾನವಲ್ಲ. ಆ ಸರ ಇಂದಿಗೂ ನನ್ನ ಕಣ್ಣೆದುರು ನಳನಳಿಸುತ್ತಿದೆ. ಸರ ಚಿಕ್ಕದಾಗಿದ್ದರೂ ಅದರಲ್ಲಿ ಎಣಿಸಿ ಸುಸ್ತಾಗುವಷ್ಟು ವಜ್ರಗಳಿದ್ದವು. ನಾನು ಆ ಸರದಲ್ಲಿ ಕರಗಿ ಹೋಗುತ್ತ,

‘ಫ಼ರ್ಸಾನ್, ನನಗಾಗಿ ಯಾಕಿಷ್ಟು ಬೆಲೆಬಾಳುವ ಸರ?’ ಅಂದಿದ್ದೆ. ಅದಕ್ಕಾತ ನಗುತ್ತ, ‘ಇಂದಿನವರೆಗೆ ನಾನು ನೀನು ಎಷ್ಟು ಸಲ ಭೇಟಿಯಾಗಿದ್ದೆವೆಯೋ ಅಷ್ಟು ವಜ್ರಗಳಿವೆ ಈ ಸರದಲ್ಲಿ’ ಅಂದಿದ್ದ. ಅವನ ಮಾತು ಕೇಳಿ ಕಣ್ಣೀರಿಳಿಸುತ್ತ ಅವನನ್ನೇ ನೋಡುತ್ತ ನಿಂತೆ. ಕೆಲವೇ ದಿನಗಳಲ್ಲಿ ನಾವು ಒಬ್ಬರಿಗೊಬ್ಬರು ಇಷ್ಟು ಹತ್ತಿರವಾದೆವೆ? ಅನ್ನುವ ಪ್ರಶ್ನ್ನೆಯ ಉತ್ತರಕ್ಕಾಗಿ ನಾನು ಅವನ ಕಣ್ಣಲ್ಲಿ ಇಣುಕಲು ಪ್ರಯತ್ನಿಸಿದೆ. ವಜ್ರದ ಹೊಳಪಿನಿಂದಲೋ ಅಥವಾ ಅವನ ಕಣ್ಣಿನ ಹುಟ್ಟು ತೇಜಸ್ಸೋ ಏನೋ ಅವನ ಕಣ್ಣುಗಳು ಹೊಳೆಯುತ್ತಿದ್ದವು. ನನ್ನ ಇಡೀ ಜೀವನದಲ್ಲಿ ನಾನು ಸಂಪೂರ್ಣವಾಗಿ ನಂಬಿದ್ದ ಮನುಷ್ಯ ಫ಼ರ್‌ಸಾನ್. ಈತ ಎಂದೂ ನನಗೆ ದ್ರೋಹ ಬಗೆಯಲಿಲ್ಲ. ಉಚ್ಚ ಮನೆತನದ, ಉಚ್ಚ ಶಿಕ್ಷಣವುಳ್ಳ, ತೀಕ್ಷ್ಣ ಬುದ್ಧಿಮತ್ತೆಯುಳ್ಳ, ಗ್ರೀಕ್ ದೇವರ ಲಕ್ಷಣವುಳ್ಳ ಸ್ವೀಡನ್ನಿನ ಈ ಸುಂದರ ಉಮ್‌ರಾವ್‌ನ ಪರಿಚಯ ಒಂದು ಪಾರ್ಟಿಯಲ್ಲಾಯಿತು. ಆ ಪರಿಚಯ ಸ್ನೇಹದಲ್ಲಿ ತದನಂತರ ಪ್ರೀತಿಯಲ್ಲಿ ಪರಿವರ್ತನೆಯಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕ್ರಾಂತಿಯ ಕಾಲದಲ್ಲಿ ನಾನೀತನ ಭುಜದ ಮೇಲೆ ತಲೆಯಿಟ್ಟು ಅತ್ತಿದ್ದೇನೆ. ಇವನೇ ಅವನು ನನ್ನ ಜೀವಾಳ. ಶಾರೀರಿಕವಾಗಿ ನಾವು ಬಹಳ ಕಡಿಮೆ ಸಲ ಸೇರಿದ್ದೆವು ಏಕೆಂದರೆ ಅದಕ್ಕಿಂತ ಶ್ರೇಷ್ಠವಾದ ನಮ್ಮಿಬ್ಬರ ಆತ್ಮ ಮಿಲನ ಎಂದೋ ನಡೆದು ಹೋಗಿತ್ತು. ಶುಧಃ ಅಂತಃಕರಣದಿಂದ ಪ್ರೀತಿಸಿದ ಈ ಫ಼ರ್‌ಸಾನ್ ನನ್ನ ಜೀವನದ ಮೊದಲ ಹಾಗೂ ಕೊನೆಯ ಪುರುಷ. ಮುಂದೆ ಯಾರನ್ನೂ ನಾನು ನನ್ನ ಸನಿಹ ಸುಳಿಯಗೊಡಲಿಲ್ಲ ಅನ್ನುವುದು ನಿಜವಾದರೂ ನನ್ನ ಯೌವ್ವನದ ಗೆಳೆಯ ಮೋಝಾರ್ತನ ನೆನಪನ್ನು ನಾನೆಂದೂ ನನ್ನಿಂದ ಬೇರ್ಪಡಿಸಲಿಲ್ಲ. ಕಳೆದ ಅನೇಕ ತಿಂಗಳುಗಳಿಂದ ಫ಼ರ್ಸಾನ್‍ನನ್ನು ನೋಡಲು ಕೂಡ ಸಾಧ್ಯವಾಗಿಲ್ಲ.

ಆ ಸಾಯಂಕಾಲ ನನಗೆ ಚನ್ನಾಗಿ ನೆನಪಿದೆ. ಆಗಷ್ಟೆ ಫ಼ರ್ಸಾನ್ ನನಗೆ ಸರ ಕೊಟ್ಟು ಹೋಗಿದ್ದ. ಬರುವ ವಾರದಲ್ಲಿ ನಾವು ಮತ್ತೆ ಭೇಟಿಯಾಗುವವರಿದ್ದೆವು. ಅದೇ ಯೋಚನೆಯಲ್ಲಿ ನಾನು ಉದ್ಯಾನವನದಲ್ಲಿ ವಿಹರಿಸುತ್ತಿದ್ದೆ. ಚಳಿಗಾಲದ ಆಗಮನದ ಸುಳಿವು ಕೊಡುತ್ತ ತಣ್ಣನೆಯ ಗಾಳಿ ಬೀಸುತ್ತಿತ್ತು. ಗಗನದ ಬೂದು ಬಣ್ಣ ನನ್ನ ತಿಳಿನೀಲಿ ಸರೋವರದಲ್ಲೂ ತೇಲುತ್ತಿತ್ತು. ಬಣ್ಣಬಣ್ಣದ ಮೀನುಗಳು ನಾನು ಹಾಕಿದ ಆಹಾರ ತಿನ್ನಲು ನೀರಿನ ಮೇಲ್ಭಾಗಕ್ಕೆ ಬರುತ್ತಿದ್ದವು. ಅಕ್ಕಪಕ್ಕದಲ್ಲಿ ನವಿಲು ನೃತ್ಯ ಹಂಸದ ವಯ್ಯಾರ ನಡಿಗೆ ನಡೆದಿತ್ತು. ಲಿಲ್ಲಿ ಗಿಡ ಆ ಋತುವಿನ ಕೊನೆ ಹೂ ಬಿಟ್ಟಿತ್ತು. ಇದನ್ನೆಲ್ಲ ನೋಡಿ ನನಗೆ ಅಳು ಬಂತು, ಈ ಮೀನುಗಳಂತೆ, ಹಾರಾಡುವ ಹಕ್ಕಿಗಳಂತೆ ನನ್ನ ಜೀವನವೂ ಶಾಂತ, ನಿರಾಳ, ನಿಶ್ಚಿಂತತೆಯಿಂದ ಕೂಡಿರಬೇಕಿತ್ತು ಅನಿಸಿತು. ಅಷ್ಟರಲ್ಲಿ ಏನೋ ಗದ್ದಲ ಕೇಳಿಸಿತು. ನನ್ನ ನಿಷ್ಠಾವಂತ ಸೇವಕ ಓಡಿ ಬಂದು ‘ಕ್ರಾಂತಿಕಾರರೆಲ್ಲರೂ ಅರಮನೆಯ ಮೇಲೆ ದಂಡೆತ್ತಿ ಬರುತ್ತಿದ್ದಾರೆ, ನಾನು ಇಲ್ಲಿಂದ ಓಡಿ ಹೋಗತಕ್ಕದ್ದು’. ಅನ್ನುವ ಸಂದೇಶವನ್ನು ತಂದಿದ್ದ. ಅದನ್ನು ಕೇಳಿದ್ದೆ ನಾನು ಹುಚ್ಚಿಯ ಹಾಗೆ ಓಡತೊಡಗಿದೆ. ಆದರೆ ಅದು ಹೇಗೋ ಹುಲ್ಲಿನಲ್ಲಿ ಕಾಲು ಸಿಕ್ಕಿ ಬಿದ್ದುಬಿಟ್ಟೆ. ಹಾಗೇ ಹಿಂತಿರುಗಿ ನೋಡಿದೆ. ನಾನೆ ಕಟ್ಟಿ ಬೆಳೆಸಿದ್ದ ನನ್ನ ಅತ್ಯಂತ ಪ್ರೀತಿಯ ತ್ರಿಯೋನಾದ ನಾಟ್ಯಗೃಹ, ನನ್ನ ಅರಮನೆ, ಆ ಲ್ಯಾಂಡ್ ಸ್ಕೇಪ್, ನೀಲಿ ಸರೋವರ, ಅದರಲ್ಲಿದ್ದ ಚಿನ್ನದ ಹೊಳಪಿದ್ದ ಮೀನುಗಳು, ಆ ಪರಿಸರ, ಎಲ್ಲವನ್ನೂ ಕಣ್ತುಂಬ ನೋಡುತ್ತ ಇದ್ದುಬಿಟ್ಟೆ. ಬಹುಶಃ ನಾನಿವುಗಳನ್ನು ಮತ್ತೆ ನೋಡುತ್ತೇನೋ ಇಲ್ಲವೋ ಅನಿಸಿತು. ಹಾಗಾದರೆ ಆಹಾರ ಹಾಕುವವರಿಲ್ಲದೆ ಈ ನನ್ನ ಮೀನುಗಳ ಗತಿ? ನಾಟಕದ ರಿಹರ್ಸಲ್ ಯಾರು ನೋಡಿಕೊಳ್ಳುತ್ತಾರೆ? ಎಂದೆಲ್ಲ ಯೋಚಿಸುತ್ತಿದ್ದಂತೆ,

‘ರಾಣಿ ಸಾಹೇಬರೆ, ಬೇಗ ಹೊರಡಿ,’ ಎಂದು ಆ ಸೇವಕ ದೀನನಾಗಿ ಬೇಡಿಕೊಂಡ.

‘ಪರಮೇಶ್ವರ, ನನ್ನ ಕನಸುಗಳನ್ನು ನಿನ್ನ ಕೈಗೆ ಒಪ್ಪಿಸುತ್ತಿದ್ದೇನೆ, ಅವುಗಳನ್ನು ಜೋಪಾನ ಮಾಡು’, ಎಂದು ನನ್ನ ಮನಸ್ಸು ರೋದಿಸಿತು.

ಕೊನೆಗೂ ಜನತೆಗೆ ಅವರ ಪ್ರತಿಫ಼ಲ ಸಿಕ್ಕಿತು. ನಮ್ಮನ್ನು ಸೆರೆ ಹಿಡಿದು ಎತ್ತಿನ ಗಾಡಿಯಲ್ಲಿ ಫ಼್ರಾನ್ಸಗೆ ತಂದಾಗ ಎಲ್ಲರೂ ವಿಜಯೋತ್ಸಾಹದಿಂದ ಮೈಮರೆತು ಕುಣಿಯುತ್ತಿದ್ದರು.

ಲುಯಿಲರಿಯ ಅರಮನೆಗೆ ನಮ್ಮ ರವಾನೆಯಾಯಿತು. ಆ ಅರಮನೆಯ ಅವಸ್ಥೆ ಹೇಳತೀರದು, ನಮ್ಮ ಗೈರುಹಾಜರಿಯಲ್ಲಿ ಫ಼ರ್ನಿಚರ್ ಮತ್ತಿತರ ಬೆಲೆಬಾಳುವ ಸಾಮಾನುಗಳ ಲೂಟಿಯಾಗಿತ್ತು. ಒಂದು ಕಾಲದಲ್ಲಿ ವೈಭವದಿಂದ ಮೆರೆದ ಅರಮನೆ ಈಗ ದನದ ದೊಡ್ಡಿಯಂತೆ ತೋರುತ್ತಿತ್ತು.
`ಶೀ...! ನಾವು ಇಂತಹ ಹೊಲಸು ಜಾಗದಲ್ಲಿರಬೇಕೆ?’ ಯುವರಾಜರು ನನ್ನನ್ನು ಅಲುಗಾಡಿಸುತ್ತ ಕೇಳುತ್ತಿದ್ದರು. ಅವರ ಪ್ರಶ್ನೆಯಿಂದ ನನ್ನುಸಿರು ಕಟ್ಟಿದಹಾಗಾಯ್ತು. ಏನು ಉತ್ತರಿಸಲಿ ನನ್ನ ಕರುಳ ಕುಡಿಗೆ?
‘ಹೌದು, ನಾವೀಗ ಇದೇ ಜಾಗಕ್ಕೆ ಒಗ್ಗಿಕೊಳ್ಳಬೇಕು’, ಎಂದು ಲೂಯಿ ಶಾಂತವಾಗಿ ಹೇಳಿದಾಗ ಯುವರಾಜರು ಒಪ್ಪಿದಂತೆ ತೋರಿತು. ಆದರೆ ನನ್ನ ಇಡೀ ಮೈ ಉರಿದು ಹೋಯಿತು. ಯಾಕೆ? ಯಾಕೆ ನಾವು ಈ ಜೀವನವನ್ನು ಒಪ್ಪಿಕೊಳ್ಳಬೇಕು? ಒತ್ತಾಯದಿಂದ ಹೇರಿದ ಜೀವನ ನನಗೆ ಬೇಡವಾಗಿತ್ತು. ನಮ್ಮ ಇಚ್ಛೆಯ ವಿರುದ್ಧ ನಮ್ಮನ್ನಿಲ್ಲಿ ಕರೆತರಲಾಗಿತ್ತಾದ್ದರಿಂದ ನಾನು ಬಹಳ ಅಸ್ವಸ್ಥಳಾಗಿದ್ದೆ. ಅದಕ್ಕೂ ಮಿಗಿಲಾಗಿ ಲೂಯಿಯ ತಣ್ಣನೆಯ ಪ್ರತಿಕ್ರಿಯೆ ನನ್ನ ಪಿತ್ತ ನೆತ್ತಿಗೇರಿಸಿತು. ‘ಆತ್ಮ ಸಮ್ಮಾನ’ ಅನ್ನುವ ಶಬ್ದ ಈತನ ಬದುಕಿನಲ್ಲಿರಲೇಯಿಲ್ಲ. ನಾನು ತೀರ ಹತಾಶಳಾದೆ, ಫ಼ರ್ಸಾನ್ ಮಾತ್ರ ನಮ್ಮ ಬಿಡುಗಡೆಗಾಗಿ ಏನೆಲ್ಲ ಮಾಡುತ್ತಿದ್ದ. ಹೊರಗಿದ್ದುಕೊಂಡೇ ನಮ್ಮ ಪಲಾಯನದ ಯೋಜನೆಯನ್ನು ತಯಾರಿಸಿದ್ದ. ನಿಯತಿಯ ಮನಸ್ಸಿನಲ್ಲಿದ್ದಿದ್ದರೆಆ ಆ ಯೋಜನೆ ಸಫ಼ಲವೂ ಆಗುತ್ತಿತ್ತು. ಆದರೆ ಫ಼್ರಾನ್ಸನ ಸೀಮೆ ದಾಟಲು ಇನ್ನು ಕೆಲವೇ ಕಿಲೋಮೀಟರ್‌ಗಳಿರುವಾಗ ನಾವು ಬಂಧಿತರಾದೆವು. ದುರ್ದೈವ, ಕೇವಲ ನಮ್ಮ ದುರ್ದೈವ.
(ಮುಂದುವರೆಯುವುದು.)