Friday, April 2, 2010

ಅನಂತ ವೇದನೆಯ ರಾಣಿ-೩

ಅನಂತ ವೇದನೆಯ ರಾಣಿ-೩


ಮೇಡಂ:
ಹೌದು ರಾಣಿ ನಿಂಫೋಮೇನಿಯಾಕ್ ಅನ್ನುವುದನ್ನು ಸಾಬೀತುಪಡಿಸುವ ಸಾಕಷ್ಟು ಪುರಾವೆಗಳನ್ನು ಅಭ್ಯಸಿಸಿದ್ದೇನೆ ನಾನು. ರಾಣಿಗೆ ಬರೀ ಸುಖ ಬೇಕಿತ್ತು, ಬೇರೆ ಬೇರೆ ರೀತಿಯಿಂದ ಪಡೆಯಲ್ಪಡುವ ಸುಖ. ಯಾರ ಮುಲಾಜಿಲ್ಲದೆ ಆ ಸುಖವನ್ನಾಕೆ ಪಡೆದುಕೊಂಡಳು ಕೂಡ. ‘ಏಳು ವರ್ಷಗಳು ಆಕೆ ಮಕ್ಕಳಿಲ್ಲದೆ ದುಖಃ ಪಡುತ್ತಿದ್ದಳು’ ಅನ್ನುವ ಸುಚಿತ್ರಾಳ ದಾವೆಯನ್ನು ನಾನು ಒಪ್ಪುವುದಿಲ್ಲ. ಅವಳದೇ ಆದ ಸುಖಮಯ ಜೀವನದಲ್ಲಿ ಅಳುವುದು ವ್ಯಥೆ ಪಡುವುದು ಇರಲೇಯಿಲ್ಲ.
ನಿಶಾಚರ ಪ್ರಾಣಿಗಳ ತರಹ ಅವಳ ದಿನ ಕೂಡ ರಾತ್ರಿಯೇ ಆರಂಭವಾಗುತ್ತಿತ್ತು. ನಾಟಕ, ಬಾಲ್ ಡಾನ್ಸ್, ಇಸ್ಪಿಟ್ ಆಡುವುದು, ಮುಂದೊಂದು ದಿನವಂತೂ ‘ಆರ್ಜಿ’ ಪಾರ್ಟಿಗಳು’, ಹೀಗೆ ಅವಳ ಸುಖಕರ ಪ್ರವಾಸ ಸಾಗಿತ್ತು. ಬಾಲ್ ಡಾನ್ಸ್‌ಗಾಗಿ ಬರುತ್ತಿದ್ದ ಎಷ್ಟೋ ಸುಂದರ ತರುಣರು ಅವಳ ಸಹವಾಸಕ್ಕಾಗಿ ಹಾತೊರೆಯುತ್ತಿದ್ದರು. ಎಷ್ಟೋ ಶ್ರೀಮಂತ ಉಮರಾವ್‌ರು ಬರೆದಿಟ್ಟ ತಮ್ಮ ನೆನಪಿನ ಹೊತ್ತಿಗೆಗಳಲ್ಲಿ ರಾಣಿಯ ಜೊತೆ ಉಂಡ ಸುಖದ ವರ್ಣನೆಯಿದೆ. ಅದೆಲ್ಲ ಸುಳ್ಳು ಹೇಗಾಗುತ್ತದೆ? ದಿನಗಳೆದಂತೆ ತನ್ನದೇ ವಯಸ್ಸಿನ ಗಂಡಸರ ಆಕರ್ಷಣೆ ಆಕೆಗೆ ಅನಿವಾರ್ಯವಾಗುತ್ತ ಬಂತು. ವಿಲಾಸಿ ಜೀವನದ ಜೊತೆಗೆ ಬೇಕಾದಷ್ಟು ಸಮಯ ಕೂಡ ಸಿಗುತ್ತಿತ್ತು.
ತಂತಮ್ಮ ಕೆಲಸಗಳನ್ನು ಮುಗಿಸಿ ಮನೆಗೆ ಮರಳುವ ಪ್ರಜಾಜನರ ಸುಸ್ತಾದ ಮುಖಗಳನ್ನಾಕೆ ದಿನಾ ನೋಡುತ್ತಿದ್ದಳು. ಅವರ ನಮಸ್ಕಾರಗಳನ್ನು ದಿಮಾಖಿನಿಂದ ಸ್ವೀಕರಿಸುತ್ತಿದ್ದಳೇ ವಿನಹ ಚಳಿಯಲ್ಲಿ ನಡುಗುತ್ತಿದ್ದ ಬಡ ಪ್ರಜೆಗಾಗಿ ಆಕೆಯ ಮನಸ್ಸು ಎಂದೂ ಮರುಗಲಿಲ್ಲ. ತಾನು ಮಾಡುತ್ತಿರುವ ಈ ಮೋಜು ಈ ಸಾಮಾನ್ಯ ಜನ ಕಟ್ಟುತ್ತಿರುವ ಕರದ ದುಡ್ಡಿನಿಂದ ಅನ್ನುವುದವಳಿಗೆ ಅರ್ಥವಾಗಲೇಯಿಲ್ಲ. ಅವಳ ನೆನಪಿನಲ್ಲಿದ್ದದ್ದು ಪ್ಯಾರಿಸ್‌ನಲ್ಲಾದ ಅವಳ ಭವ್ಯ ಸ್ವಾಗತ, ಪ್ಯಾರಿಸ್‌ನ ಝಗಮಗಿಸುವ ರೂಪ. ಕಷ್ಟಪಟ್ಟು ಜೀವನ ಸಾಗಿಸುತ್ತಿರುವ ಜನತೆಯತ್ತ ಆಕೆ ಕಣ್ಣೆತ್ತಿಯೂ ನೋಡಲಿಲ್ಲ. ಅವರ ಕಷ್ಟಗಳನ್ನೆಂದೂ ಅರ್ಥಮಾಡಿಕೊಳ್ಳಲಿಲ್ಲ.
ಮನಸ್ಸು ಮಾಡಿದ್ದಿದ್ದರೆ ಆಕೆ ಫ಼್ರಾನ್ಸಿನ ಮಹಾರಣಿಯಾಗಬಹುದಿತ್ತು. ಅವಳ ಆಕರ್ಷಕ ರೂಪ, ಅವಳ ಮೊದಲ ದರ್ಶನ ಜನತೆಯ ಮನಸ್ಸಿನಲ್ಲಿ ಅಚ್ಚೊತ್ತಿತ್ತು, ಬೆಳ್ಳಗಿನ ತ್ವಚೆಯ ಫ಼್ರೆಂಚ್ ಜನತೆಗೆ ರಾಣಿಯ ಅಸಾಮಾನ್ಯ ಗುಲಾಬಿ ಬಣ್ಣದ ಪೋರ್ಚೆಲಿನ್ ವರ್ಣ, ನೀಲಿ ಕಣ್ಣುಗಳು, ಹಂಸ ನಡಿಗೆಗಳ ಆಕರ್ಷಣೆ ಮೊದಲ ಕೆಲವು ದಿನ ಬಹಳಷ್ಟಿತ್ತು. ಪಾರ್ಲಿಮೆಂಟಿನ ಯಾವುದೇ ಸಭೆಗಾಕೆ ಹಾಜರಾಗಲಿಲ್ಲ, ಯವುದೇ ರೀತಿಯ ರಾಜಕೀಯ ಚರ್ಚೆಗಳಲ್ಲಿ ಭಾಗವಹಿಸಲಿಲ್ಲ, ಹಾಗೂ ಪ್ರಶಾಸನದ ಯಾವುದೇ ಕಾಗದ ಪತ್ರಗಳನ್ನಾಕೆ ತನ್ನ ಕೈಯಲ್ಲಿ ಹಿಡಿಯಲಿಲ್ಲ.
ಇವೆಲ್ಲದಕ್ಕೆ ಬೇಕಾದ ಸ್ಥಿರಚಿತ್ತ ವೃತ್ತಿ ಹಾಗೂ ಅಪಾರ ಬುದ್ಧಿಮತ್ತೆ ರಾಣಿಯಲ್ಲಿರಲಿಲ್ಲ. ಅವಳ ಚಂಚಲ ಮನಸ್ಸು ಬರೀದೇ ಇಂದ್ರೀಯ ಸುಖಕ್ಕಾಗಿ ಹಾತೊರೆಯುತ್ತಿತ್ತು. ಈ ವಿಧಾನಕ್ಕೆ ಪುಷ್ಟಿ ಕೊಡುವ ಅನೇಕ ಉದಾಹರ‍ಣೆಗಳು ದೊರೆಯುತ್ತವೆ. ರಾಣಿಯ ಚರಿತೆಯನ್ನು ಅಭ್ಯಸಿಸುವಾಗ ನಾನು ಆ ಕಾಲದ ಭೌಗೋಲಿಕ ಪಾರ್ಶ್ವಭೂಮಿಯನ್ನು ಗಮನದಲ್ಲಿಟ್ಟು ಅಭ್ಯಸಿಸಿದಾಗ ನೊಂದಾಯಿಸಿಡುವಂತಹ ಒಂದು ಪ್ರಸಂಗ ನನ್ನ ಗಮನಕ್ಕೆ ಬಂತು. ಅದೇ ಹೆಕ್ಸಾಗೋನ್. ಅಂದರೆ ಷಟ್ಕೋನಿ ಆಕಾರದ ಫ಼್ರಾನ್ಸಿನಲ್ಲಿ ರಾಣಿ ಕೇವಲ ಆರು ಪ್ರಾಂತ್ಯಗಳಲ್ಲೇ ವಿಹರಿಸಿದ್ದಾಳೆ. ಈ ಪ್ರಾಂತ್ಯಗಳು ಮತ್ತು ಆಕೆಯ ವಾಸ್ತವ್ಯ ಇದರ ಪುರಾವೆಯನ್ನು ನಾನು ಫ಼್ರಾನ್ಸನ ನಕ್ಷೆಯಲ್ಲಿ ನಮೂದಿಸಿದ್ದೇನೆ. ಇದರಿಂದ, ತಾನು ಯಾವ ದೇಶದ ರಾಣಿಯೋ ಆ ದೇಶದಲ್ಲಿ ವಾಸಿಸುತ್ತಿರುವ ಜನತೆ, ಅವರ ಸಂಸ್ಕೃತಿ ಹಾಗೂ ಪ್ರಾಂತ್ಯದ ರಚನೆಗಳನ್ನು ತಾನು ತಿಳಿದುಕೊಳ್ಳಬೇಕು ಅನ್ನುವ ಬುದ್ಧಿ ಕೂಡ ರಾಣಿಗಿರಲಿಲ್ಲಲ ಅನ್ನುವುದು ಗೊತ್ತಾಗುತ್ತದೆ.
ಅವಳ ‘ತ್ರಿಯೋನಾ’ ದ ಅರಮನೆ. ಭೋಗವಿಲಾಸವೇ ಮೂರ್ತಿವೆತ್ತ ಪ್ರತೀಕವದು. ಅರಮನೆಯ ಹೊರಗೆ ಜಪಾನಿ ಲ್ಯಾಂಡ್ ಸ್ಕೇಪ್, ನೀಲಿ ಸರೋವರ, ಏಶಿಯಾದಿಂದ ತರಿಸಿದ್ದ ನವಿಲುಗಳು, ಚೈನಾದಿಂದ ಜೋಪಾನವಾಗಿ ತರಿಸಿದ್ದ ಚಿನ್ನದ ಹೊಳಪುಳ್ಳ ಮೀನುಗಳು, ಹಾಗೂ ಆಫ಼್ರಿಕಾದಿಂದ ತರಿಸಿದ್ದ ರಾಜಹಂಸಗಳು ಇವುಗಳಿಂದಾಗಿ ಆ ಅರಮನೆಗೆಗೊಂದು ಸುಂದರ ಮೆರಗು ಬಂದಿತ್ತು. ಅರಮನೆಯ ಗೋಡೆಗಳು, ಫ಼ರ್ನಿಚರ್ ಹಾಗೂ ಕಲಾಕುಸುರಿಯ ವಸ್ತುಗಳನ್ನು ಅತ್ಯಂತ ಜೋಪಾನವಾಗಿ ಮಂಡಿಸಲಾಗಿತ್ತು. ಸಾವಿರ ಕಪಾಟುಗಳಲ್ಲಿ ಚಿನ್ನಾಭರಣಗಳು, ಬಗೆಬಗೆ ವಿನ್ಯಾಸದ ವಸ್ತುಗಳು ತುಂಬಿತುಳುಕುತ್ತಿದ್ದವು. ಸುಚಿತ್ರಾಗೆ ಇವುಗಳಲ್ಲಿ ರಾಣಿಯ ಉಚ್ಚ ಅಭಿರುಚಿ ಕಾಣಿಸುತ್ತದೆ, ನಿಜಕ್ಕೂ ಸುಚಿತ್ರಾಳ ಇನ್ನೋಸೆನ್ಸ್ ಬಗ್ಗೆ ಆಶ್ಚರ್ಯವಾಗುತ್ತದೆ. ಇದರಲ್ಲಿ ರಾಣಿಯ ಸೌಂದರ್ಯ ಸೃಷ್ಟಿ ಎಲ್ಲಿಂದ ಬಂತು? ಎಲ್ಲ ಹಣದ ಮಹಿಮೆ, ದುಡ್ಡು ಬಿಸಾಕಿದರೆ ಬೇಕಾದ್ದು ಸಿಗುತ್ತದೆ ಅನ್ನುವುದೊಂದು ಸುಲಭದ ಸಮೀಕರಣ. ರಾಣಿಯ ಹತ್ತಿರ ಸಾಕಷ್ಟು ದುಡ್ಡಿತ್ತು, ಭಾರಿ ವಸ್ತುಗಳನ್ನು ಖರೀದಿಸಿ ‘ಹಣ ಪಾವತಿಸತಕ್ಕದ್ದು’ ಎಂದು ಬರೆದು ಸಹಿ ಮಾಡಿದರೆ ಮುಗಿಯಿತು, ಆದರೆ ಆ ಹಣ ಪಾವತಿಸಲು ಬಡ ಜನತೆ ಹಗಲು ರಾತ್ರಿ ದುಡಿಯುತ್ತದೆ ಅನ್ನುವುದು ಅವಳಿಗೆ ಅರ್ಥವಾಗುತ್ತಿರಲಿಲ್ಲವೆ?
ಒಂದಂತೂ ನಿಜ ಭಾರತೀಯ ನವಾಬರಂತೆ ರಾಣಿ ತನ್ನ ಒಡವೆಗಳನ್ನು ಬೀರುವಿನಲ್ಲಿ ಕೂಡಿ ಹಾಕಲಿಲ್ಲ, ದಿನದ ಪ್ರತಿ ಪ್ರಹರದಲ್ಲೂ ವಿವಿಧ ರೀತಿಯ ಶೃಂಗಾರ ಮಾಡಿಕೊಂಡು ಅವುಗಳನ್ನು ಉಪಯೋಗಿಸುತ್ತಿದ್ದಳು. ಬೆಳಿಗ್ಗೆ ನಾಲ್ಕು ಘಂಟೆಗೆ ಅರಮನೆಗೆ ಮರಳುತ್ತಿದ್ದ ರಾಣಿ ಸೂರ್ಯ ನೆತ್ತಿಗೇರಿದ ಮೇಲೆಯೇ ಏಳುತ್ತಿದ್ದದ್ದು. ತದನಂತರ ‘ಬೆರ್ತ್ಯಾ ಹಾಗೂ ಲಿಯೋನಾರ್ದ’ ಅನ್ನುವ ತನ್ನ ಡ್ರೆಸ್ ಡಿಸೈನರ್ ಜೊತೆ ಆ ದಿನದ ವಿವಿಧ ಉಡುಪುಗಳ, ಕೇಶಾಲಂಕಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸುತ್ತಿದ್ದಳು. ಲಿಯೋನಾರ್ದ ಮಣ್ಣಿನ ವಿವಿಧ ಮೂರ್ತಿಗಳನ್ನು ತಯಾರಿಸುವಂತೆ ರಾಣಿಯ ಕೂದಲಿನ ಬೇರೆಬೇರೆ ಚಿತ್ರವಿಚಿತ್ರ ವಿನ್ಯಾಸಗಳನ್ನು ರಚಿಸುತ್ತಿದ್ದ, ಮತ್ತೆ ಬಿಚ್ಚುತ್ತಿದ್ದ. ಕೆಲವೊಮ್ಮೆ ಎಂಟು ಗಂಟುಗಳ ರಚನೆ, ಕೆಲವೊಮ್ಮೆ ಕೂದಲುಗಳನ್ನು ಗುಂಗುರು ಮಾಡಿ ಬಿಡುತ್ತಿದ್ದ. ತ್ರಿಯೋನಾದ ಅರಮನೆಯಲ್ಲಿ ಖಾಸಾ ಸಮಾರಂಭಗಳಲ್ಲಿ ಖಾಸಾ ಥೀಮ್ಸಗಳಿರುತ್ತಿದ್ದವು. ಅದಕ್ಕನುಸಾರವಾಗಿ ರಾಣಿಯ ವಸ್ತ್ರವಿನ್ಯಾಸ ಹಾಗೂ ಕೇಶವಿನ್ಯಾಸವಿರುತ್ತಿತ್ತು. ಒಮ್ಮೆಯಂತೂ ಬಹು ಉದ್ದದ ಮೇಣದ ಬತ್ತಿಯನ್ನು ತಲೆಯಮೇಲಿಟ್ಟು ಅದರ ಸುತ್ತ ಕೂದಲನ್ನು ಸುತ್ತಿ ಒಂದು ರೀತಿಯ ಟಾವರನ್ನೇ ರಚಿಸಲಾಗಿತ್ತು. ಇಷ್ಟೆಲ್ಲ ಮಾಡಿದ ಮೇಲೆ ಆ ಟವರನ್ನು ಹೊತ್ತು ಹೋಗುವುದಕ್ಕೆ ಅರಮನೆಯ ಬಾಗಿಲುಗಳು ಸಾಕಷ್ಟು ಎತ್ತರವಾಗಿಲ್ಲ ಅನ್ನುವುದು ಗಮನಕ್ಕೆ ಬಂದು ತಕ್ಷಣವೇ ಕೆಲಸಗಾರರನ್ನು ಕರೆದು ಒಂದೇ ರಾತ್ರಿಯಲ್ಲಿ ಬಾಗಿಲುಗಳನ್ನು ಒಡೆದು ಅವುಗಳ ಚೌಕಟ್ಟನ್ನು ಎತ್ತರಿಸಿದಳು ರಾಣಿ. ಇದೆಲ್ಲವನ್ನು ನೋಡಿಯೂ ಕೂಡ ಎಲ್ಲರೂ ಸುಮ್ಮನಿರಬೇಕಾಯಿತೇ ಹೊರತು ಏನೂ ಮಾಡುವಂತಿರಲಿಲ್ಲ. ರಾಜ್ಯ ಶಕ್ತಿಯ ಎದುರು ಯಾವ ಶಕ್ತಿಯೂ ನಿಲ್ಲಲಾರದು.

ಹೀಗೆ ತನ್ನ ಚಿತ್ರ ವಿಚಿತ್ರ ಶೋಕಿಗಳನ್ನು ಪೂರೈಸಿಕೊಳ್ಳಲು, ಅದಕ್ಕಾಗಿ ಹಣ ಗಳಿಸಲು ರಾಣಿ ಇಸ್ಪಿಟ್ ಆಡಲಾರಾಂಭಿಸಿದಳು. ಹಾಕಿದ ಹಣವನ್ನು ಕಳೆದುಕೊಂಡಿದ್ದೇ ಅಲ್ಲದೆ ಗೆದ್ದ ಹಣವನ್ನೂ ಇದಕ್ಕೇ ಸುರಿದಳು.

ದುದೈವದಿಂದ ಸುಚಿತ್ರ ಈ ಎಲ್ಲ ಸತ್ಯದಿಂದ ದೂರ ಓಡುತ್ತಿದ್ದಾಳೆ. ರಾಣಿಯ ಚರ್ಚೆಯನ್ನು ವಸ್ತುನಿಷ್ಠವಾಗಿ ಮಾಡುವುದನ್ನು ಬಿಟ್ಟು ತುಂಬಾ ಭಾವನಾತ್ಮಕವಾಗಿ ವರ್ತಿಸುತ್ತಿದ್ದಾಳೆ. ಕಳೆದ ಎರಡು ದಿನಗಳಿಂದ ಅಂದರೆ ರಾಣಿಯ ವಾಸ್ತವ್ಯವಿದ್ದ ವರ್ಸಾಯದ ಅರಮನೆ, ಅವಳ ಅಂತಃಪುರ, ಅವಳ ಕತ್ತಲ ಕೋಣೆಗಳನ್ನು ನೋಡಿ ಬಂದಂದಿನಿಂದ ತುಂಬ ಹಳಹಳಿಸುತ್ತಿದ್ದಾಳೆ. ರಾಣಿಯ ಈ ರೀತಿಯ ನಡತೆಗೆ ಕಾರಣಗಳನ್ನು ಹುಡುಕಬೇಕು ಅನ್ನುತ್ತಿದ್ದಾಳೆ. ರಾಣಿಯ ತಪ್ಪು ವರ್ತನೆಯ ಬಗ್ಗೆ ಪೂಷ್ಟಿ ಕೊಡುವ, ಯುಕ್ತಿವಾದವನ್ನು ಮಂಡಿಸುವ ನಿಂಭಂದವನ್ನು ಬರೆಯುವ ಬದಲು ಅವಳ ನಿಜವಾದ ವ್ಯಕ್ತಿತ್ವ, ಅವಳ ನಡತೆಯಿಂದ ಫ಼್ರಾನ್ಸಿನ ಇತಿಹಾಸಕ್ಕೆ ಸಿಕ್ಕ ಹೊಸ ಆಯಾಮ, ತಾತ್ಕಾಲಿಕ ಸಮಾಜ ಜೀವನದ ಮೇಲಾದ ಪರಿಣಾಮಗಳು ಇವುಗಳೇ ನಿಭಂದದ ವಿಷಯಗಳಾಗಬೇಕು ಅನ್ನುವುದು ನನ್ನನಿಸಿಕೆ. ಈ ನಿಭಂದಕ್ಕೆ ಸುಚಿತ್ರಾಳ ಸಹಾಯ ಬಯಸಿ ನಾನು ತಪ್ಪು ಮಾಡಿದೆನೆ?

(ಮುಂದುವರೆಯುವುದು).

3 comments:

 1. akshata,
  ರಾಣಿಯ ಆಕರ್ಷಕ ವ್ಯಕ್ತಿತ್ವ,ಅವಳ ದುರ್ನಡತೆಗಳು,ಚಟಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.. ಮುಂದುವರೆಯಲಿ..

  ನಿಮ್ಮ ನಿರೀಕ್ಷೆಯಲ್ಲಿ..: http://manasinamane.blogspot.com/

  ReplyDelete
 2. ನಿಮ್ಮ ಪ್ರತಿಕ್ರಿಯೆಗೆ ತುಂಬ ಥ್ಯಾಂಕ್ಸ್.
  ಅಕ್ಷತ.

  ReplyDelete
 3. ರಾಣಿಯ ವ್ಯಕ್ತಿತ್ವದ ಧನಾತ್ಮಕ, ಋಣಾತ್ಮಕ ಗಳ ಬಗೆಗೆ ತಿಳಿಸಿದ್ದಿರಿ
  ಮುಂದಿನ ಬರಹದ ನೀರೀಕ್ಷೆಯಲ್ಲಿ

  ReplyDelete