Wednesday, March 31, 2010

ಅನಂತ ವೇದನೆಯ ರಾಣಿ-೨

ರಾಣಿ:

‘ಕನ್ನಡಿ, ಏ ಕನ್ನಡಿ, ನಿಜ ಹೇಳು, ನಾನಿಷ್ಟು ಕೆಟ್ಟವಳೆ? ನಿಂದನೀಯಳೆ?’

ಇಂದಿನವರೆಗೆ ಕನ್ನಡೆಯೆದುರು ನನ್ನ ಪ್ರತಿಬಿಂಬವನ್ನು ಅದೆಷ್ಟೋ ಸಲ ಹೀಗೇ ಪ್ರಶ್ನಿಸಿದ್ದೇನೆ. ಬಹುಶಃ ಅದರ ಉತ್ತರವೂ ಭ್ರಮೆಯೇಯಿರಬೇಕು. ಹಾಗಾದರೆ ನಿಜ ಯಾವುದು? ದಶದಿಕ್ಕುಗಳಿಂದಲೂ ನಿನಾದಿಸುತ್ತಿರುವ ಈ ಚುಚ್ಚು ಘೋಷಣೆಗಳೇ?

‘ನರಿಯ ಈ ಮಾಯಾವಿ ರೂಪ ಭಸ್ಮವಾಗಲಿ’.

‘ಆಕೆ ಹಿಂದೆಯೂ ನಮ್ಮ ರಾಣಿಯಾಗಿರಲಿಲ್ಲ, ಮುಂದೆಯೂ ಆಗಲಾರಳು’.

‘ಏನು ನೋಡುತ್ತಿದ್ದೀರಿ? ಚಚ್ಚಿ ಹಾಕಿ ಆ ನಾಯಿಯನ್ನು, ಕಲ್ಲಿನಿಂದ ಚಚ್ಚಿರಿ’.

ಇಂತಹ ಘೋಷಣೆಗಳನ್ನು ನಿಲ್ಲಿಸಿ, ಹೇಗೆ ಸಹಿಸಲಿ ನಾನಿವುಗಳನ್ನು? ಯಾರಾದರೂ ನಿಲ್ಲಿಸಿ ಈ ಕ್ರೂರ ಆಟವನ್ನು, ನಾನು ಸ್ವಲ್ಪವೂ ಸಹಿಸಲಾರೆ, ನನ್ನ ಪ್ರಜೆಗಳು ನನ್ನನ್ನು ಕೊಲ್ಲಲು ಹೊರಟಿದ್ದಾರೆ, ಒಂದು ಕಾಲದಲ್ಲಿ ಜೈಕಾರ ಘೋಷಿಸಿರುವ ನಾಲಿಗೆಗಳು ಇಂದು ನನ್ನ ಚರಿತ್ರೆಯನ್ನು ಪ್ರಶ್ನಿಸುತ್ತಿವೆ. ಕೆಲವರ ಪ್ರಕಾರ ನಾನು ‘ಸಲಿಂಗ ಕಾಮಿ’, ಕೆಲವರ ಪ್ರಕಾರ ನಾನು ಸಮೂಹ..... ಕೆಲವರಂತೂ ನಾನು ನನ್ನ ಭೋಗದ ಅಗ್ನಿಕುಂಡಕ್ಕೆ ನನ್ನ ಮಗನನ್ನು ಬಲಿ ಕೊಟ್ಟಿದ್ದೇನೆ ಅನ್ನುತ್ತಿದ್ದಾರೆ. ನಾನು ಭ್ರಷ್ಟೆ, ಜನತೆಯ ಸಂಪತ್ತನ್ನ ವ್ಯಯ ಮಾಡಿದ್ದೇನೆ, ಬಡ ಜನತೆಯ ಬಗ್ಗೆ, ದೇಶದ ಬಗ್ಗೆ ನನಗ್ಯಾವ ಆತ್ಮೀಯತೆಯೂ ಇಲ್ಲ, ಫ಼್ರಾನ್ಸನ ಇಂದಿನ ಅಧಃಪತನಕ್ಕೆ ನಾನೇ ಕಾರಣ, ಅನ್ನುವ ಘೋಷಣೆಗಳ ಪ್ರತಿಗಳನ್ನು ತಯಾರಿಸಿ ನನ್ನ ಬಗ್ಗೆ ವಿಷಕಾರುವ ಸಲುವಾಗಿ ಜನರಲ್ಲಿಂದು ಹಂಚುತ್ತಿದ್ದಾರೆ. ವೃತ್ತಪತ್ರಿಕೆಯ ಕಾಲಂಗಳು ಕೂಡ ನನ್ನ ಬಗ್ಗೆ ಏನೆಲ್ಲ ಬರೆಯುತ್ತಿವೆ. ಯಾರೂ ಬಂದು ನನ್ನ ಮೇಲೆ ಕಲ್ಲೆಸೆಯಬಹುದಾಗಿದೆ! ನನಗೀಗ ನನ್ನವರೆನ್ನಬಹುದಾದವರು ಯಾರೂ ಇಲ್ಲ. ನಾನು ಒಂಟಿ.

‘ಅವಳಾದರೋ ಪಾಪಿಷ್ಟೆ, ಆದರೆ ಅವಳ ಮೇಲೆ ಕಲ್ಲೆಸೆಯುವ ಸಜ್ಜನರೆ ನಿಮ್ಮಲ್ಲಿ ಒಬ್ಬರಾದರೂ ಪುಣ್ಯವಂತರಿದ್ದೀರಾ?’ ಎಂದು ಕೇಳಲು ಜೀಜಸ್ ಕೂಡ ಬರಲಾರ. ನಿಜಕ್ಕೂ ನಾನಿಷ್ಟು ಪಾಪಿಯೆ? ನನ್ನ ತಪ್ಪೇನು? ನಾನು ಹೇಗೆ ನಡೆದುಕೊಳ್ಳಬೇಕಿತ್ತು? ಇಪ್ಪತ್ನಾಲ್ಕು ವರ್ಷಗಳ ಹಿಂದೆ ಇದೇ ಪ್ಯಾರಿಸ್‌ನ ಸುಶೋಭಿತ ರಸ್ತೆಗಳ ಮೇಲೆ ನನ್ನ ಮೆರವಣಿಗೆ ಎಷ್ಟು ಅದ್ದೂರಿಯಾಗಿ ಹೊರಟಿತ್ತು!

‘ರಾಜಾ-ರಾಣಿ ಚಿರಾಯುವಾಗಲಿ, ಫ಼್ರಾನ್ಸನ ಪವಿತ್ರ ಭೂಮಿಯ ಮೇಲೆ ರಾಣಿಗೆ ಸ್ವಾಗತ, ರಾಣಿಗೆ ಜಯವಾಗಲಿ’, ಎಂದು ಗಂಟಲು ಹರಿಯುವಂತೆ ಕಿರಿಚುತ್ತಿದ್ದರು. ಮದುವೆಯಾಗಿ ಗಂಡನ ಮನೆಗೆ ಬಂದ ದಿನ ಜನ ಅದೊಂದು ಶುಭ ಕಾರ್ಯವೆನ್ನುವಂತೆ ಆಚರಿಸಿದ್ದರು. ಹದಿನಾಲ್ಕು ವರ್ಷದ ಆಸ್ಟ್ರಿಯನ್ ರಾಜಕನ್ಯೆ ಫ಼್ರಾನ್ಸ ದೇಶದ ಸೊಸೆಯಾಗಿ ಪ್ಯಾರಿಸ್‌ನ ಹದ್ದು ದಾಟಿ ಒಳಬಂದಿದ್ದಳು. ಆದರೆ ಈ ಮದುವೆಗೆ ನನ್ನ ಒಪ್ಪಿಗೆಯಿತ್ತೆ? ಅಂತರ್‌ರಾಷ್ಟ್ರೀಯ ರಾಜಕೀಯ ಮೈದಾನದಲ್ಲಿ ಎ‍ರಡು ರಾಜಕೀಯ ಮನೆತನಗಳು ಆಡುತ್ತಿದ್ದ ಹೊಲಸು ರಾಜಕೀಯ ಆಟದಲ್ಲಿ ನಾನೊಂದು ಸೂತ್ರದ ಗೊಂಬೆಯಾದೆ. ದುರ್ದೈವದಿಂದ ನನ್ನ ಕತ್ತಿನಲ್ಲಿ ತೂಗುಬಿಟ್ಟಿದ್ದ ಸೂತ್ರ ನನ್ನ ತಾಯಿಯ ಕೈಯಲ್ಲಿತ್ತು.

‘ಅಮ್ಮ, ಯಾವುದು ಈ ಫ಼್ರಾನ್ಸ ದೇಶ? ಅಲ್ಲಿಯ ಯಾವುದೋ ಅಪರಿಚಿತನ ಜೊತೆ ಮದುವೆಯಾಗುವುದು ನನಗಿಷ್ಟವಿಲ್ಲ, ನಿನಗೆ ಗೊತ್ತಲ್ಲ ಅವನು, ನನ್ನೊಡನೆ ಆಟ ಆದಲಿಕ್ಕೆ ಬರುವವನು, ಒಳ್ಳೆಯ ಹಾಡು ಹೇಳುವವನು, ಬೀಥೋಪೇನ್ ಕೂಡ ನುಡಿಸುತ್ತಾನಲ್ಲ’ ಎಂದು ಹೇಳುತ್ತಿದ್ದಂತೆ ಅಮ್ಮ ನನ್ನನ್ನು ತಡೆದು,

‘ಆ ಭಿಕಾರಿ ಸಂಗೀತಕಾರನ ಜೊತೆ ಮದುವೆಯಾಗಿ ಬಾಳನ್ನು ಹಾಳು ಮಾಡ್ಕೋಬೇಕು ಅಂದುಕೊಂಡಿದ್ದೀಯಾ? ನಾನು ಮಾಡುವುದು ನಿನ್ನ ಒಳ್ಳೆಯದಕ್ಕಾಗಿಯೆ ನೆನಪಿಟ್ಟುಕೋ’ ಅಂದು ನನ್ನ ಬಾಯಿ ಮುಚ್ಚಿಸಿದ್ದರು.

ಈ ಮದುವೆಯಿಂದ ಯಾರಿಗೆ ಒಳ್ಳೆಯದಾಯಿತು? ಅನ್ನುವುದು ಆ ದೇವರೇ ಬಲ್ಲ. ನನ್ನ ಜೀವನದ ಮೊದಲು ಹದಿನಾಲ್ಕು ವರ್ಷ ನಾನು ಅಮ್ಮನನ್ನು ಅವಲಂಬಿಸಿದ್ದೆ. ಅವಳ ವ್ಯಕ್ತಿತ್ವದಲ್ಲಿ ಮಮತೆಗಿಂತ ಭೀತಿಯನ್ನೇ ಹೆಚ್ಚು ಕಂಡೆ. ಆಸ್ಟ್ರೀಯಾದ ರಾಜ್ಯವನಾಳುವ, ಅನೇಕ ಋತುಮಾನಗಳನ್ನು ಕಂಡಿರುವ ಒಬ್ಬ ಮುತ್ಸದ್ದಿ ಮಹಿಳೆ ತಪ್ಪು ಮಾಡುವಳೆ? ಅಂದುಕೊಂಡಿದ್ದೇ ತಪ್ಪಾಯಿತು, ಆಕೆ ತಪ್ಪಿದ್ದಳು ಪರಂಪರಾಗತವಾಗಿ ವೈರತ್ವವನ್ನು ಸಾಧಿಸಿಕೊಂಡು ಬಂದಿದ್ದ ಫ಼್ರಾನ್ಸ್‍ಗೆ ತನ್ನ ಮಗಳನ್ನು ಕೊಟ್ಟು ಅಲ್ಲಿ ತಾನು ಅತಿಕ್ರಮಣ ಮಾಡಬಹುದು ಎಂದಾಕೆ ಅಂದುಕೊಂಡಿದ್ದೇ ತಪ್ಪಾಯಿತು. ರಾಜಕೀವೆಂಬ ಪಗಡೆಯಾಟದಲ್ಲಿ ಆಕೆಗೆ ಬೇಕಾದ ದಾಳಗಳು ಬೀಳದೆ ಆಕೆ ಸೋತಳು. ಆಕೆಯಲ್ಲಿ ಧೋರಣೆಯಿತ್ತೇ ಹೊರತು ಮಮತೆಯಿರಲಿಲ್ಲ. ಆಕೆಗೆ ತನ್ನ ಸಿಂಹಾಸನದ ಚಿಂತೆಯಿತ್ತೇ ಹೊರತು ಮಗಳದ್ದಲ್ಲ. ರಾಜ್ಯದ ಚಿಂತೆಯಿತ್ತೇ ವಿನಹ ಮಗಳ ಅಭ್ಯುದಯದ ಚಿಂತೆಯಿರಲಿಲ್ಲ.

೨ನೆಯ ನವಂಬರ್ ೧೭೫೫ ರ ಆಲ್ ಸೋಲ್ಸ ಡೆ ಯ ಪವಿತ್ರ ದಿನದಂದು ವ್ಹಿಯೆನ್ನಾದಲ್ಲಿ ನಾನು ಜನಿಸಿದೆ. ತಾಯಿಯ ಹಾಲನ್ನಷ್ಟೆಯಲ್ಲ ಆಕೆ ಕೊಟ್ಟಿದ್ದನ್ನೆಲ್ಲವನ್ನೂ ವಿಶ್ವಾಸದಿಂದ ಸ್ವೀಕರಿಸಿದೆ. ನಾನು ನನ್ನ ತಾಯಿಯ ಹಾಗೆ ಬುದ್ಧಿವಂತಳಲ್ಲ, ಚಾಣಾಕ್ಷಳಂತೂ ಅಲ್ಲವೆ ಅಲ್ಲ. ಶಿಕ್ಷಣ ಹಾಗೂ ರಾಜಕೀಯದ ಬಗ್ಗೆ ನನಗೆ ಹೇಸಿಗೆಯಿತ್ತು. ಬಂಗಾರದ ಇಟ್ಟಿಗೆಗಳಿಗಿಂತ ನಿರ್ಮಲ, ಶುದ್ಧ ನೀಲಾಕಾಶವೇ ನನಗೆ ಪ್ರೀಯವಾಗಿತ್ತು. ಗಣಿತಕ್ಕಿಂತ ಸಂಗೀತದ ಜೊತೆ ನನಗೆ ಹತ್ತಿರದ ಸಂಭಂದ. ನನ್ನ ಕಿವಿಯಲ್ಲಿ, ಮನಸ್ಸಿನಲ್ಲಿ ಯಾವಾಗಲೂ ಮೋಝಾರ್ಥನ ಹಾಡು ಗುಂಯಗುಡುತ್ತಿರುತ್ತಿತ್ತು. ಶೋನ್ ಭ್ರೂನ್‌ನ ಅರಮನೆಯ ಗೋಡೆಗಳು ನಮ್ಮ ಯುಗಳ ಗೀತೆಗಳಿಗೆ ಸಾಕ್ಷಿಯಾಗಿವೆ. ಒಂದು ದಿನ ಮೋಝಾರ್ಥ ನನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡು ಮುತ್ತಿಡುತ್ತ,

‘ನೋಡುತ್ತಿರು, ಒಂದು ದಿನ ನಾನು ಜಗತ್ತಿನ ಸರ್ವೋತ್ಕೃಷ್ಟ ಸಂಗೀತಗಾರನಾಗಿ ನಿನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುತ್ತೇನೆ’ ಅಂದಿದ್ದ.

ಅವನು ತನ್ನ ಒದ್ದೆ ತುಟಿಗಳಿಂದ ಅಚ್ಚೊತ್ತಿದ್ದ ಮುತ್ತನ್ನು ನಾನಿನ್ನೂ ಜೋಪಾನವಾಗಿಟ್ಟಿದ್ದೇನೆ. ನಾನು ತುಂಬ ಮನಸ್ಸಿಟ್ಟು ಸಂಗೀತ ಕಲಿಯುತ್ತಿದ್ದೆ, ನನಗದು ಇಷ್ಟವಾಗುತ್ತಿತ್ತು, ಮೋಝಾರ್ಥ ಇಷ್ಟವಾಗುತ್ತಿದ್ದ, ಆತನ ಒದ್ದೆ ಚುಂಬನಗಳು ಇಷ್ಟವಾಗುತ್ತಿದ್ದವು.

ಆದರೆ ಒಂದು ಕೆಟ್ಟ ಘಳಿಗೆಯಲ್ಲಿ ಫ಼್ರಾನ್ಸಿನ ಸತ್ತಾಧೀಶರು ನನ್ನನ್ನು ನೋಡಿ ಅವರ ಹದಿನೈದು ವರ್ಷದ ಮೊಮ್ಮಗ ಲೂಯಿಗಾಗಿ ನನ್ನ ಕೈ ಬೇಡಿದರು. ಅಮ್ಮನೇ ಮುಂದಾಳತ್ವ ವಹಿಸಿ ಈ ಸಂಭಂದ ಕುದುರಿಸಿರಬೇಕು ಅನ್ನುವ ಕೆಟ್ಟ ಅನುಮಾನ ನನಗೆ. ಸಂಪೂರ್ಣ ಜಗತ್ತನ್ನೇ ತನ್ನ ಕಿರುಬೆರಳ ಮೇಲೆ ಕುಣಿಸುತ್ತಿದ್ದ ಅಮ್ಮನಿಗೆ ಲೂಯಿ ಮೂರ್ಖ ಹಾಗೂ ಅಸಂಜಸ ಅನ್ನುವುದು ಗೊತ್ತಿರಲಿಲ್ಲವೆ? ಗೊತ್ತಿರಲಿಕ್ಕೂ ಸಾಕು, ಏಕೆಂದರೆ ರಾಜನೀತಿ ಕೇವಲ ವ್ಯವಹಾರವನ್ನ ಮಾತ್ರ ಪರಿಗಣಿಸುತ್ತದೆ, ಸಂಭಂದವನ್ನಲ್ಲ. ಅದರದೇ ಅಂಗವಾಗಿ ನನ್ನ ಟ್ರೇನಿಂಗ್ ಪ್ರಾಂರಂಭವಾಯಿತು. ಫ಼್ರಾನ್ಸಿನ ರಾಜಮನೆತನದವರ ಜೊತೆ ಹೊಂದಿಕೊಳ್ಳಬೇಕಾದ ರೀತಿ, ಅಲ್ಲಿಯ ರೀತಿ-ನೀತಿ, ಸಂಸ್ಕೃತಿ, ಭೂಗೋಳ, ಉಚ್ಚರಿಸಲೂ ಕಠಿಣವಾದಂತಹ ಫ಼್ರೆಂಚ್ ಭಾಷೆ. ಒಂದೇ ಎರಡೆ. ಮದುವೆಯ ಎರಡು ತಿಂಗಳು ಮುಂಚಿನಿಂದಲೇ ಅಮ್ಮ ನನ್ನ ಕೋಣೆಯಲ್ಲಿ ನನ್ನೊಡನೆ ಮಲಗಲಾರಂಭಿಸಿದಳು. ನನ್ನ ಕಣ್ಣು ರೆಪ್ಪೆಗಳು ಮುಚ್ಚಲು ತವಕಿಸುತ್ತಿದ್ದ ಕಾಲದಲ್ಲಿ ನಾನು ಅಮ್ಮನಿಂದ ಬೌದ್ಧಿಕ ಪಾಠ ಕಲಿಯಬೇಕಾಗುತ್ತಿತ್ತು. ಸ್ತ್ರೀ ಪುರುಷರ ಸಂಭಂದದ ಬಗ್ಗೆ ಅಮ್ಮನಿಂದಲೇ ವಿಸ್ತಾರವಾಗಿ ಗೊತ್ತಾದದ್ದು. ಎಲ್ಲವೂ ಯೋಜನಾಬದ್ಧವಾಗಿ ನಡೆಯುತ್ತಿದ್ದರೂ ಅಮ್ಮ ಸದಾಕಾಲ ಯಾವುದೋ ಚಿಂತೆಯಲ್ಲಿರುವಂತೆ ತೋರುತ್ತಿತ್ತು. ಯಾವಾಗಲೋ ಮಧ್ಯರಾತ್ರಿ ನನ್ನ ಕೂದಲುಗಳಲ್ಲಿ ಆಡುತ್ತಿದ್ದ ಅಮ್ಮನ ಸ್ಪರ್ಷದಿಂದ ಎಚ್ಚರವಾಗುತ್ತಿತ್ತು. ತನ್ನ ಅಸಂಜಸ, ಸಾಮಾನ್ಯ ಬುದ್ಧಿಯ ಮಗಳನ್ನು ರಾಜಮನೆತನದ ಚದುರಂಗಪಟದ ಪೇದೆಯಾಗಿ ಬಳಸುತ್ತಿದ್ದೇನೆ ಅನ್ನುವ ಅರಿವು ಅವಳನ್ನು ಕಾಡುತ್ತಿತ್ತೆ?

ಮದುವೆಯ ಮೊದಲ ರಾತ್ರಿ ನಾವು ಬಹಳ ದಣಿದಿದ್ದರಿಂದ ನಿದ್ರಾದೇವಿ ತಟ್ಟನೆ ಒಲಿದಿದ್ದಳು. ಬಹುಶಃ ಫ಼್ರಾನ್ಸನ ನೆಲದ ಮೇಲೆ ಅದೇ ನನ್ನ ಮೊದಲ ಹಾಗೂ ಕೊನೆಯ ಶಾಂತ ನಿದ್ರೆ. ಆದರೆ ಎರಡನೆಯ ರಾತ್ರಿಯೂ ಏನೂ ನಡೆಯಲಿಲ್ಲ, ಮೂರನೆಯ, ನಾಲ್ಕನೆಯ ರಾತ್ರಿಯೂ ಇಲ್ಲ. ಹಾಗೂ ಮುಂದಿನ ಸತತ ಏಳು ವರ್ಷಗಳವರೆಗೆ ಏನೂ ನಡೆಯಲಿಲ್ಲ.

ನನ್ನ ಪತಿ ಅನಿಸಿಕೊಂಡ ಲೂಯಿ, ಫ಼್ರಾನ್ಸನ ಭಾವಿ ರಾಜ, ಸುಖ ಕೊಡುವುದಕ್ಕೂ ತೆಗೆದುಕೊಳ್ಳುವುದಕ್ಕೂ ಅಸಮರ್ಥನಾಗಿದ್ದ. ಮೊದಮೊದಲು ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದವ ವಿಫ಼ಲನಾದಾಗ ಸುಸ್ತಾಗಿ ನಿದ್ದೆಹೋಗುತ್ತಿದ್ದ. ಘಟಿಸದೇ ಹೋದ ಘಟನೆಗಾಗಿ ಸಿಟ್ಟು, ಪಶ್ಚಾತ್ತಾಪ, ನಾಚಿಕೆ ಯಾವುದೂ ಅವನಲ್ಲಿರಲಿಲ್ಲ. ಚಿಕ್ಕ ಮಗುವೊಂದು ಗಟ್ಟಿ ಮುಚ್ಚಳ ಹಾಕಿದ ಡಬ್ಬಿಯೊಡನೆ ಆಟವಾಡಿ ಕಡೆಗೆ ಮುಚ್ಚಳ ತೆರೆಯಲು ಅಸಮರ್ಥನಾಗಿ ಬೇಸತ್ತು ಬಿಸಾಡಿಬಿಡುವ ಹಾಗೆ ಅವನ ವರ್ತನೆ. ಆದರೆ ಲೂಯಿ ಚಿಕ್ಕ ಮಗುವೂ ಅಲ್ಲ ಹಾಗೂ ನಾನು ಗಟ್ಟಿ ಮುಚ್ಚಳದ ಡಬ್ಬಿಯೂ ಅಲ್ಲ. ಸುಂದರ ಶರೀರದ, ಕನಸುಗಣ್ಣಿನ ಮೃದು ಮನಸ್ಸಿನ ಹದಿನಾಲ್ಕು ವರ್ಷದ ಬಾಲೆ ನಾನು. ಮರುದಿನ ಡೈರಿ ಬರೆಯುವಾಗ ಲೂಯಿ ಭಾವನಾರಹಿತನಾಗಿ ಖಾಲಿ ಪುಟದ ಮೇಲೆ ‘ಅಸಫ಼ಲತೆ’ ಎಂದಷ್ಟೆ ಬರೆಯುತ್ತಿದ್ದ, ಅವನ ಪುಟ ಅದೊಂದೇ ಶಬ್ದದಿಂದ ತುಂಬಿಬಿಡುತ್ತಿತ್ತು. ಆದರೆ ಆ ಶಬ್ದ ಮಾತ್ರ ನನ್ನ ಜೀವನಕ್ಕೆ ಬಂಜೆತನದ ಲೇಬಲ್ ಅಂಟಿಸಿತು. ಮದುವೆಯಾಗಿ ತಿಂಗಳುಗಳು ಕಳೆದರೂ ಮಕ್ಕಳಾಗುವ ಸೂಚನೆ ಕಾಣದ್ದರಿಂದ ಎಲ್ಲರೂ ಅಸ್ವಸ್ಥರಾಗಿದ್ದರು. ನನ್ನ ಲೈಂಗಿಕ ಆಚರಣೆ ಹೇಗಿರಬೇಕು? ಲೂಯಿಯನ್ನು ಮೋಹಿಸಲು ನಾನೇನು ಮಾಡಬೇಕು? ಅನ್ನುವ ಮೌಲಿಕ ಸೂಚನೆಗಳ ಪತ್ರಗಳು ಅಮ್ಮನಿಂದ ಬರಲಾರಂಭಿಸಿದ್ದವು. ಇಲ್ಲಿ ಅತ್ತೆ ಮನೆಯ ಸ್ತ್ರೀಯರು ಗೊತ್ತಿರುವ ವ್ರತಗಳನ್ನೆಲ್ಲ ನನ್ನ ಮೇಲೆ ಹೇರುತ್ತಿದ್ದರು. ಇಷ್ಟೆಲ್ಲ ನಡೆಯುವಾಗ ನನ್ನಲ್ಲಿ ಯಾವ ದೋಷವೂ ಇರಲಾರದು ಅನ್ನುವ ವಿಚಾರ ಯಾರ ಮನಸ್ಸಿನಲ್ಲೂ ಬರಲಿಲ್ಲ. ಇಲ್ಲಿ ಮೊದಲೇ ಬಾಯಿಗೆ ಬೀಗ ಜಡಿದಂತಿದ್ದ ಲೂಯಿ ಹೆಚ್ಚು ಮೌನವಾಗುತ್ತ ಹೋದ. ಹುಟ್ಟಿನಿಂದಲೇಯಿದ್ದ ಆಲಸ್ಯ ಈಗ ಅವನ ಮೇಲೆ ಆಧಿಪತ್ಯ ನಡೆಸುತ್ತಿತ್ತು. ಸಾರ್ವಜನಿಕ ಸ್ಥಳಗಳಿಗೆ ಭೇಟಿಕೊಡುವುದನ್ನು ನಿಲ್ಲಿಸಿದ ಆತ ದಿನದ ಹೆಚ್ಚು ಸಮಯವನ್ನು ಬೇಟೆ ವ್ಯಾಯಾಮ ಹಾಗೂ ಆಡುವುದರಲ್ಲಿ ಕಳೆಯತೊಡಗಿದ. ಇದೆಲ್ಲದರಿಂದ ತನ್ನ ಪೌರುಷ ಮರಳಿ ಬರುತ್ತದೆ ಅಂದುಕೊಂಡನೋ ಏನೊ. ಆದರೆ ಲೂಯಿ ಒಬ್ಬ ಸಂಪೂರ್ಣ ಪುರುಷನಾಗಿದ್ದ ಅನ್ನುವುದನ್ನು ಇಷ್ಟು ತಿಂಗಳ ಸಾಮಿಪ್ಯದಿಂದ ನಾನು ಬಲ್ಲವಳಾಗಿದ್ದೆ. ಹೀಗಿದ್ದರೂ ಕಠಿಣ ಪ್ರಸಂಗಕ್ಕೆ ಪರಿಹಾರ? ಕಡೆಗೆ ನಾನೇ ಮುಂದುವರೆದು ರಾಜನಿಗೆ ಸುಂಥಾ ಮಾಡಿಸುವುದು ಅನ್ನುವ ಸೂಚನೆ ಕೊಟ್ಟು ಲೂಯಿಯ ಮನ್ನಣೆಯನ್ನೂ ಪಡೆದೆ, ಆದರೆ ಈ ವಾರ್ತೆ ಕಾಡ್ಗಿಚ್ಚಿನಂತೆ ಹರಡಿ ಜನರ ಕಣ್ಣರಳಿಸಿತು. ಹೆಣ್ಣಾಗಿ ಹುಟ್ಟಿ ಇಂತಹ ಮಾತನ್ನು ಇಷ್ಟು ಸುಲಭವಾಗಿ ಹೇಗೆ ಹೇಳಬಲ್ಲಳು? ಅನ್ನುವುದೇ ಅವರ ಪ್ರಶ್ನೆ. ಇದು ನನ್ನ ಜೀವನದ ಪ್ರಶ್ನೆ, ಅಲ್ಲದೆ ಹೆಂಡತಿಯಾಗಿ ಗಂಡನನ್ನು ನಾನಲ್ಲದೆ ಇನ್ಯಾರು ಹತ್ತಿರದಿಂದ ಬಲ್ಲವರಾಗುತ್ತಾರೆ? ಇದನ್ನೆಲ್ಲ ಅರ್ಥಮಾಡಿಕೊಳ್ಳದ ಜನ ನನ್ನನ್ನು ‘ಮೇನಿಯಾಕ್’ ಅಂದರು. ಎಂತಹ ವಿರೋಧಾಭಾಸ! ಭವಿಷ್ಯದಲ್ಲಿ ಹಕ್ಕು ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಫ಼್ರಾನ್ಸಿನ ಜನತೆ ಹೆಂಡತಿಯಾಗಿ ನಾನು ಪಡೆಯಬೇಕಿದ್ದ ಹಕ್ಕಿಗೆ ‘ಮೇನಿಯಾಕ್’ ಅಂದರು.

(ಮುಂದುವರೆಯುವುದು).

6 comments:

  1. ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ
    ಕುತೂಹಲ ಹೆಚ್ಚುತ್ತಿದೆ
    ಆ ಹೆಣ್ಣು ಮಗಳ ಮನಸ್ಸಿನ ವೇದನೆ ಕಣ್ಣಿಗೆ ಕಟ್ಟುವಂತಿದೆ

    ReplyDelete
  2. ನಿಮ್ಮ ಎರಡೂ ಅಭಿಪ್ರಾಯಗಳಿಗೆ ತುಂಬ ಧನ್ಯವಾದ ಗುರುಮೂರ್ತಿಯವರೆ. ಮೂರನೆಯ ಭಾಗ ಒಂದೆರಡು ದಿನದಲ್ಲೇ:)
    ಅಕ್ಷತ.

    ReplyDelete
  3. akshata,

    ತುಂಬಾ ಚೆನ್ನಾಗಿದೆ,
    ..ಮೊದಲ ಭಾಗವನ್ನು ಓದುವೆ..

    ನಿಮ್ಮ ನಿರೀಕ್ಷೆಯಲ್ಲಿ..: http://manasinamane.blogspot.com

    ReplyDelete
  4. ತುಂಬ ತುಂಬ ಥ್ಯಾಂಕ್ಸ್ ರಿ.
    ಅಕ್ಷತ.

    ReplyDelete
  5. ಈ ಕಥೆಯನ್ನು ಹಸ್ತಪ್ರತಿ ರೂಪದಲ್ಲಿ ಕನಿಷ್ಟಪಕ್ಷ ೪-೫ ಬಾರಿಯಾದರೂ ಓದಿರುವೆ ನಾನು. ಓದಿದಾಗಲೊಮ್ಮೆ ಅವರವರ ಭಾವಕ್ಕೆ.. ಎನ್ನುವ ವಚನದ ಸಾಲು ನೆನಪಾಗಿ "ಜೀವನ ಅಂದರೆ ಇದೇ ಅಲ್ಲವಾ? ನಾವಿರೋದೇ, ಯೋಚಿಸೋದೇ ಒಂದು, ಅದು ಇನ್ನೊಬ್ಬರಿಗೆ ಕಾಣೋದೇ ಒಂದು!" ಅಂತನಿಸಿದ್ದಿದೆ. ಅಕ್ಷತಾ ಇದುವರೆಗು ಅನುವಾದಿಸಿದ ಮತ್ತು ಅವರ ಸ್ವಕೃತಿಗಳಲ್ಲಿ ನನಗೆ ತುಂಬಾ ಇಷ್ಟವಾದ ಬರಹವಿದು. ಕನ್ನಡಕ್ಕೆ ಈ ಕಥೆಯನ್ನು ತಂದಿದ್ದಕ್ಕೆ ಥ್ಯಾಂಕ್ಸ್ ಅಕ್ಷತಾ.

    ReplyDelete
  6. ೪-೫ ಬಾರಿ ಓದಿಯು ಅದೇ ಉತ್ಸಾಹದಿಂದ ಮತ್ತೆ ಓದಿ ಪ್ರತಿಕ್ರಿಯ್ಸಿದ್ದಕ್ಕೆ ತುಂಬ ಥ್ಯಾಂಕ್ಸ್ ರಿ ಜಯಾ.
    ಅಕ್ಷತ.

    ReplyDelete