Sunday, May 2, 2010

ಅನಂತ ವೇದನೆಯ ರಾಣಿ-೫

ಅನಂತ ವೇದನೆಯ ರಾಣಿ-೫


ರಾಣಿ:


ಇತಿಹಾಸಕರರನ್ನು ದೂಷಿಸಲೆ? ಕೊನೆಯ ಮೂರು ವರ್ಷ ಕಠಿಣ ಶಿಕ್ಡ್ಶೆ ಅನುಭವಿಸುತ್ತಿರುವಾಗ ನನ್ನ ಹೆಸರು ಹಾಗೂ ಸಾಧನೆ ಫ಼್ರಾನ್ಸನ ಇತಿಹಾಸದಲ್ಲಿ ಕಪ್ಪು ಮಸಿಯಲ್ಲಿ ಬರೆಯಲ್ಪಡುತ್ತದೆ ಅನ್ನುವುದು ನನಗೆ ಮನದಟ್ಟಗಿತ್ತಾದರೂ ನಾನು ಅಸಹಾಯಕಳಾಗಿದ್ದೆ. ಏನೂ ಮಾಡುವ ಹಾಗಿರಲಿಲ್ಲ. ನನ್ನ ನಡತೆ, ಕೃತ್ಯ ಹಾಗೇ ಇತ್ತಲ್ಲ, ಬರೀ ಕಪ್ಪು ಕಪ್ಪು. ಸಮಾಜದ ಮೌಲ್ಯಗಳ ವಿರುದ್ಧ ಮಾಡಿದ ಹೇಯ ಕೃತ್ಯಗಳು, ಆದರೆ ಮನಸ್ಸಿನಾಳದಿಂದ ಹೇಳುತ್ತಿದ್ದೇನೆ ನಾನು ಮಾಡಿದ್ದೆಲ್ಲ ಕೇವಲ ‘ಸ್ವಂತ ಸುಖಾಯ’ ಅನ್ನುವ ಭಾವನೆಯಿಂದ ಮಾತ್ರ, ಇತರರಿಗೆ ಉಪದ್ರವ ಕೊಡುವ ಉದ್ದೇಶದಿಂದಲ್ಲ.


ನಮ್ಮ ತ್ರಿಯೋನಾದ ಅರಮನೆಯಲ್ಲಿ ‘ಆರ್ಜಿ’ ಪಾರ್ಟಿಗಳು ನಡೆಯುತ್ತವೆ ಅನ್ನುವ ಅನುಮಾನ ಜನತೆಗಿತ್ತು, ನಿಜವಾಗಿಯೂ ನಾನವುಗಳನ್ನು ಉದ್ದೇಶಪೂರ್ವಕವಾಗಿ ನಡೆಸಲಿಲ್ಲ. ನಾವೆಲ್ಲ ಹಾಡಿ, ಕುಣಿದಾಡಿ ಆನಂದಿಸುತ್ತಿದ್ದೆವು. ಸುಂದರ ಗಟ್ಟಿಮುಟ್ಟಾದ ಪುರುಷರು, ಅವರೊಂದಿಗೆ ಸುಂದರ ತರುಣ ಸ್ತ್ರೀಯರು, ಮಧ್ಯರಾತ್ರಿಯ ಗೂಢ ಚಳಿಯಲ್ಲಿ ಸಂಗೀತದ ಮಂದ ಸ್ವರಗಳ ಮತ್ತೇರುತ್ತಿತ್ತು. ಆ ಒಂದು ಮತ್ತಿನಲ್ಲಿ ಅವರಿಗೂ ಗೊತ್ತಾಗದ ಕ್ಷಣದಲ್ಲಿ ಆರಂಭವಾಗುತ್ತಿತ್ತು ಪ್ರೇಮಿಗಳ ವಿಲಾಸ. ಅಕ್ಕಪಕ್ಕದ ಪರಿಸರ, ಇಡೀ ದಿನದ ಕಷ್ಟ ಆಗ ಮರೆಯಲ್ಪಡುತ್ತಿದ್ದವು. . ಅಲ್ಲಿ ಕೇವಲ ನಮ್ಮ ಪ್ರೀತಿಯ ವ್ಯಕ್ತಿಯ ಸಹವಾಸವಿರುತ್ತಿತ್ತಲ್ಲದೆ ಆ ಕೆಲವೇ ಕ್ಷಣಗಳ ಸುಖ ಹೀರಿ ತೃಪ್ತರಾಗುವ ತುಡಿತ ಕೂಡ ಪ್ರತಿಯೊಬ್ಬರ ಮನಸ್ಸಿನಲ್ಲಿರುತ್ತಿತ್ತು. ಸುಖ ಬಯಸಿ ನಾನು ಅಪರಾಧಿಯಾಗುತ್ತಿದ್ದೇನೆ ಎಂದು ನನಗೆಂದೂ ಅನಿಸಲಿಲ್ಲ. ಮದುವೆಯ ನಂತರ ನಾವು ಗಂಡ ಹೆಂಡತಿ ಸೇರಿ ಸೂರೆಗೊಳ್ಳಬೇಕಿದ್ದ ಸುಖವನ್ನು ಇತರ ಜೋಡಿಗಳು ಅನುಭವಿಸುವುದನ್ನು ನೋಡಿ ನಾಚಿಕೆ ಅಥವಾ ಹಿಂಸೆ ಅನಿಸಲಿಲ್ಲ. ಏಕೆಂದರೆ ಆ ಭಾವನೆ ಎಂದೂ ವಿಕೃತವಾಗಿರಲಿಲ್ಲ. ಮೊದಮೊದಲು ನಾನು ಅನೇಕ ಸುಂದರ ಪುರುಷರಲ್ಲಿ ಆಕರ್ಷಿತಳಾಗುತ್ತಿದ್ದೆ, ಆದರೆ ಉದಯಿಸುತ್ತಿರುವ ಸೂರ್ಯನನ್ನು ನೋಡಿ ರಾತ್ರಿಯೆಲ್ಲ ಕಿಚಗುಡುವ ಕಿಟಕಗಳು ತಮ್ಮ ಅರಚಾಟ ನಿಲ್ಲಿಸಿಬಿಡುವ ಹಾಗೆ ಕೆಲಸ ಮುಗಿದೊಡನೆ ಆ ಕ್ಷುದ್ರ ಜೀವಿಗಳು ನನಗೆ ಬೆನ್ನು ತೋರಿಸಿ ಹೊರಟುಬಿಡುತ್ತಿದ್ದರು. ಅವರ ಮನಸ್ಸು ಶರೀರ ಎರಡು ತೃಪ್ತವಾಗುತ್ತಿದ್ದವಾದರೆ ನಾನು ಮಾತ್ರ ಎಲ್ಲವನ್ನೂ ಪಡೆದೂ ಖಾಲಿಖಾಲಿಯಾಗಿರುತ್ತಿದ್ದೆ. ಆಗ ವಿಚಿತ್ರ ತಳಮಳ, ಗೊಂದಲ ಕಾಡುತ್ತಿತ್ತು, ಹೀಗೆಕೆ? ಇಷ್ಟಪಟ್ಟ ಪುರುಷನ ಜೊತೆ ರಾತ್ರಿಯೆಲ್ಲ ಸುಖಿಸಿಯೂ ನಾನು ಅತೃಪ್ತಳೇಕೆ? ನನಗೆ ತೃಪ್ತಿಯೇ ಇಲ್ಲವೆ? ನನಗೆ ನಿಜವಾಗಿ ಬೇಕಾದ್ದೇನು? ಕೇವಲ ಕಾಮಕ್ರಿಡೆಯೆ? ಅಥವಾ ಇನ್ನೇನಾದರು? ಅನ್ನುವ ಗೊಂದಲದ ಸುಳಿಯಲ್ಲಿದ್ದಗ ಲ್ಯಾಂಬೆಲ್ ನನ್ನ ಜೀವನದಲ್ಲಿ ಪ್ರವೇಶಿಸಿದಳು. ಸ್ವಚ್ಛ, ಸುಂದರ, ಹಾಗೂ ನಾಜೂಕಿನ ಶರೀರದ ಲ್ಯಾಂಬೆಲ್ ನನ್ನ ತಳಮಳವನ್ನು ಕೇಳದೆಯೇ ತಿಳಿದುಕೊಂಡಿದ್ದಳು. ಇತರರ ಹಾಗೆ ನನ್ನಲ್ಲಿದ್ದ ಹಣ, ಅಧಿಕಾರ ಆಕೆಗೆ ಬೇಕಿರಲಿಲ್ಲ, ಅವಳೇ ನಿಜವಾದ ಅರ್ಥದಲ್ಲಿ ನನ್ನನ್ನು ಅರ್ಥಮಾಡಿಕೊಂಡಿದ್ದಳು. ಸುರಿಸಿದಷ್ಟು ಹೆಚ್ಚಾಗುವ ನನ್ನ ಕಣ್ಣಿರನ್ನು ತನ್ನ ಪುಟ್ಟ ಕರವಸ್ತ್ರದಿಂದ ಒರೆಸಿತ್ತಿದ್ದಳು. ಅವಳು ನನ್ನ ತಾಯಿಯಷ್ಟೇಯಲ್ಲ ನನ್ನ ಗೆಳತಿ ಕೂಡ ಹಾಂ....ನನ್ನ ಪ್ರೇಯಸಿ ಕೂಡ ಆಗಿದ್ದವಳು. ನಾನೊಬ್ಬ ಸ್ತ್ರೀಯಾಗಿ ಇನ್ನೊಬ್ಬ ಸ್ತ್ರೀಯಲ್ಲಿ ಆಕರ್ಷಿತಳಾಗುವುದು ಸಮಾಜದ ದೃಷ್ಟಿಯಿಂದ ಒಂದು ಮಹಾಪರಾಧ. ಆದರೆ ನನಗದರಲ್ಲಿ ವಿಪರೀತವೇನೂ ಅನಿಸಲಿಲ್ಲ, ಇಂದಿಗೂ ಅನಿಸುವುದಿಲ್ಲ. ಏಕೆಂದರೆ ಶರೀರಕ್ಕಿಂತ ಆಕೆ ನನ್ನ ಮನಸ್ಸಿಗೆ ಹತ್ತಿರವಾಗಿದ್ದಳು, ನನಗಾಗಿ ಮಿಡಿಯುವ ಒಂದು ಮನಸ್ಸಿದ್ದಿದ್ದೇ ಆದರೆ ಅದು ಲ್ಯಾಂಬೆಲ್‌ಳದ್ದು ಅನ್ನುವ ನಂಬಿಕೆ ನನಗೆ. ಈ ವಿಶ್ವಾಸದ ಭಾವನೆಯೇ ನನಗೆ ಬೇಕಾದದ್ದು. ಸ್ವಚ್ಛ್ಂದವಾಗಿ ಆಡಿಕೊಂಡಿರಬೇಕಾಗಿದ್ದ ವಯಸ್ಸಿನಲ್ಲಿ ಲೈಂಗಿಕ ದೋಷವಿದ್ದ, ಮನಸಿಕ ದುರ್ಬಲನಾಗಿದ್ದ ಒಬ್ಬ ಮನುಷ್ಯನಿಗೆ ನನ್ನನ್ನು ಕಟ್ಟಿದರು, ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ವರ್ಗಾಯಿಸಲ್ಪಡುವ ವಸ್ತುವಿನಂತೆ ನಾನು ಆಸ್ಟ್ರಿಯಾದಿಂದ ಫ಼್ರಾನ್ಸ್‌ಗೆ ವರ್ಗಾಯಿಸಲ್ಪಟ್ಟೆ, ಭಾಷೆಯೇ ಗೊತ್ತಿರದ ಸಂಸ್ಕೃತಿಯ ಅರಿವಿಲ್ಲದ ಒಂದು ಬೇರೆಯೇ ಸಮಾಜದಲ್ಲಿ ಬಂದು ಸೇರಿದಾಗ ಅಸುರಕ್ಷಿತತೆಯ ಭಾವನೆ ತೀವ್ರವಾಗಿ ಕಾಡುತ್ತಿತ್ತು. ಅಂತಹ ಸಮಯದಲ್ಲಿ ಸ್ವಲ್ಪ ಪ್ರೀತಿಯಿಂದ ಮಾತನಾಡುವ ಪ್ರತಿಯೊಬ್ಬ ಗಂಡಸಿಗೆ ನಾನು ಸ್ವಾಧೀನಳಾಗುತ್ತಿದ್ದೆ. ಲ್ಯ್ಂಬೆಲ್ ಮಾತ್ರ ನನ್ನೊಂದಿಗೆ ಪ್ರಾಮಾಣಿಕವಾಗಿದ್ದಳು. ನಮ್ಮಿಬ್ಬರ ಈ ಸಂಭಂದ ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಾಗಲಿಲ್ಲ, ಸಾಧ್ಯವಿದ್ದರೂ ನಾನದನ್ನು ಮುಚ್ಚಿಡಲಿಲ್ಲ. ನನಗೆಂದು ಅದರ ಪಶ್ಚ್ಛಾತ್ತಾಪವಿಲ್ಲ, ನಾನು ಮಾಡಿದ್ದು ಪಾಪವೇ ಆಗಿರಬಹುದು ಆದರೆ ನಾನದನ್ನು ಕದ್ದುಮುಚ್ಚಿ ಮಾಡಲಿಲ್ಲ. ಈ ಕೃತ್ಯವನ್ನು ನಾನೆಂದೂ ಹೊಗಳಿಕೊಳ್ಳಲಿಲ್ಲ ಕೂಡ. ನಾನಿದ್ದ ಬಂದಿಸ್ತ ವಾತಾವರಣದಲ್ಲಿ ಶುಭ್ರ ಮುಕ್ತ ಗಾಳಿಗಾಗಿ ನಾನು ತೆಗೆದುಕೊಂಡ ಉಸಿರಾಗಿತ್ತದು. ಇದೇ ನನಗೂ ಪಾಪಕ್ಕೂ ಇದ್ದ ಸಂಬಂಧ.

ವರ್ಸಾಯದ ಅರಮನೆಯಲ್ಲಿ ನನ್ನ ಕೊದಲ ಕೆಲವು ದಿನಗಳು ಬಹಳ ನೀರಸವಾಗಿ ಕಳೆದವು. ಸೂರ್ಯೋದಯಕ್ಕೆ ಮೊದಲು ಎದ್ದು ರಾಜಮನೆತನದ ವೃದ್ಧ ಸ್ತ್ರೀಯರು ಹಾಗೂ ದಾಸಿತರೊಡನೆ ಚರ್ಚಗೆ ಹೋಗುವುದು, ಮಧ್ಯಾಹ್ನ ಹೊಲಿಗೆ ಾಡುವುದು ಇಲ್ಲವೆ ಧಾರ್ಮಿಕ ಗ್ರಂಥಗಳನ್ನು ಓದುವುದು, ಸಾಯಂಕಾಲ ಹೊಸ ಸೊಸೆಯನ್ನು ನೋಡಲು ಬರುವ ಅನೇಕ ಅಪರಿಚಿತರೆದುರು ಕುಳಿತುಕೊಳ್ಳುವುದು, ರಾತ್ರಿ ದಿಂಬಿಗೂ ತನಗೂ ಸಾಮ್ಯವಿದ್ದಂತೆ ಮಲಗುತ್ತಿದ್ದ ನನ್ನ ನಿಷ್ಕ್ರೀಯ ಪತಿಯನ್ನು ನೋಡಿ ಕಣ್ಣಿರು ಸುರಿಸುವುದು, ಇದೇ ನನ್ನ ಕೆಲಸ. ಸೂರ್ಯಾಸ್ತದ ಸಮಯದಲ್ಲಿ ಸಾವಿರುಗಟ್ಟಲೆ ಕಿಟಕಿಗಳಿದ್ದ ವರ್ಸಾಯದ ಅರಮನೆಯಲ್ಲಿ ನಿಶಃಬ್ದ ಬದುಕು ಬಾಳಬೇಕಾಗಿ ಬಂದಾಗ ಶೃಂಗಾರ ಮಾಡಿಕೊಂಡು ನಿಂತಿರುವ ಈ ರಾಣಿ ಯಾರೋ ಪರಸ್ತ್ರೀ, ಪರಿಚಯವಿಲ್ಲದ ಹೆಣ್ಣು ಅನಿಸಿ ಜೀವ ಹೆದರಿ ಹೋಗುತ್ತಿತ್ತು. ಕೈಯಲ್ಲಿ ಅಮ್ಮನ ಪತ್ರಗಳಿರುತ್ತಿದ್ದವು. ಅದರಲ್ಲೇನಿರುತ್ತಿರಲಿಲ್ಲ? ಸಾವಿರ ಸೂಚನೆಗಳ ಪಟ್ಟಿಯೇ ಅಲ್ಲಿರುತ್ತಿತ್ತು. ರಾಜಮನೆತನದ ಮತ್ಸರದ ಬಗ್ಗೆ, ಸಂಕುಚಿತ ಭಾವನೆಯುಳ್ಳ ಸ್ತ್ರೀಯರನ್ನು ನನ್ನ ಬಾಳಿನಿಂದ ತೆಗೆದು ಹಾಕುವ ಸೂಚನೆ, ಶೃಂಗಾರ ಚೇಷ್ಟೆಗಳ ಮಾಹಿತಿ, ಯಾಕಾಗಿ ಇದೆಲ್ಲ ಅನಿಸುತ್ತಿತ್ತು. ತನ್ನ ಸ್ವಾರ್ಥಕ್ಕಾಗಿ ನನ್ನನ್ನು ಕೊಳಚೆಯಲ್ಲಿ ತಳ್ಳಿದ ತಾಯಿಯ ಈ ಆಟ ನನಗೀಗ ಸಹಿಸಲಸಾಧ್ಯವಾಗಿತ್ತು. ಒಮ್ಮೊಮ್ಮೆಯಂತೂ ಆಕೆ ನನ್ನ ಮೇಲೊಂದು ಕಣ್ಣಿಟ್ಟು ತನ್ನ ಕುತಂತ್ರದಿಂದ ನನ್ನನ್ನು ಕುಣಿಸಿ ಫ಼್ರಾನ್ಸನ್ನು ತನ್ನ ಆಧಿಪತ್ಯದಲ್ಲಿ ಸೇರಿಸಿಕೊಳ್ಳಲು ಹವಣಿಸುತ್ತಿದ್ದಾಳೆಯೆ? ಅನಿಸುತ್ತಿತ್ತು. ಎಲ್ಲ ಗೊತ್ತಿದ್ದೂ ನಾನು ಅಸಹಾಯಕಳಾಗಿದ್ದೆ. ನನ್ನ ಗಂಡನೇ ಶಕ್ತಿಹೀನನಾಗಿರುವಾಗ ನಾನ್ಯಾವ ಮೂಲೆ?
ಕಡೆಗೂ ಏಳು ವರ್ಷದ ಕಠಿಣ ತಪ್ಪಸಿನ ಫ಼ಲವೆಂಬಂತೆ ಲೂಯಿ ಶಸ್ತ್ರಕ್ರಿಯೆಗೆ ತಯಾರಾದಾಗ ನನ್ನ ಮಾತೃತ್ವದ ಮಾರ್ಗವೂ ತೆರೆಯಿತು. ೨೨ ನೆಯ ಆಕ್ಟೋಬರ್ ೧೭೮೧ ರಲ್ಲಿ ನನ್ನ ಚೊಚ್ಚಿಲ ಮಗ ರಾಜಮನೆತನದ ವಾರಸುದಾರ ‘ಏಫ಼ಿನ್’ ಜನನವಾಯಿತು. ಆ ದಿನ ದಿನವೆಲ್ಲ ಚರ್ಚಿನಲ್ಲಿ ಘಂಟಾನಾದವಾಯಿತು, ರೈತರಿಗೆ ಸಾಲ ಮನ್ನಾ ಮಾಡಲಾಯಿತು, ಕೈದಿಗಳು ಮುಕ್ತರಾದರು. ಸುಖವೆಂಬ ರಾಜ್ಯದಲ್ಲಿ ನನ್ನ ಹೆಸರೂ ಸೇರಿಸಲ್ಪಟ್ಟಿತು. ೧೭೮೫ ರಲ್ಲಿ ಎರಡನೆಯ ಮಗ ಹಾಗೂ ಅವನ ಹಿಂದಿಂದೆ ಮಗಳು ಜನಿಸಿದಳು.
ಕಳೆದ ಏಳು ವರ್ಷಗಳಿಂದ ಹಗಲು ರಾತ್ರಿ ಒಂದೇ ರೀತಿ ಕಳೆದ ನನ್ನ ಬಣ್ಣದ ಜೀವನ ಕಡೆಗೆ ಮಾತೃತ್ವಕ್ಕೆ ಸಮರ್ಪಿತವಾಯಿತು.
(ಮುಂದುವರೆಯುವುದು)

4 comments:

  1. akshata,

    ನಿಮ್ಮ 'ಅನಂತವೇದನೆಯ ರಾಣಿ' ಯಲ್ಲಿ ಈ ಭಾಗ ಅತೀ ಆಸಕ್ತಿದಾಯಕ,ಮನಮೋಹಕವಾಗಿದೆ..

    ReplyDelete
  2. hi,
    aasaktiyiMda Oduttiddiralla, adakke dhanyavaada.
    akshata.

    ReplyDelete
  3. ಆತ್ಮೀಯ
    ಅದ್ಭುತ ಕಥಾನಕ (ಇದು ಕಥೆಯಲ್ಲ ನಿಜ).ನಿರೂಪಣಾ ಶೈಲಿ ಸೊಗಸಾಗಿದೆ.ಹೊರಗಿನಿ೦ದ ರಾಣಿಯ ವ್ಯಕ್ತಿತ್ವವನ್ನು ನೋಡುವ ಮೂರು ವ್ಯಕ್ತಿಗಳು. ಆಕೆಯ ಬದುಕನ್ನಿ ವಿಮರ್ಷಿಸುತ್ತಿದ್ದಾರೆ.
    ರಾಣಿ ಮಾತ್ರುತ್ವಕ್ಕಾಗಿ ಏಳು ವರ್ಷ ತನ್ನನ್ನು ತಾನು ಕೊ೦ದು ಕೊ೦ಡಳೇ? ಲೈ೦ಗಿಕ ಅತ್ರುಪ್ತಿ ಮನುಷ್ಯನನ್ನು(ಹೆಣ್ಣಾಗಲೀ ಗ೦ಡಾಗಲೀ) ಹಿ೦ಡಿಬಿಡುತ್ತೆ. ಪ್ರಕ್ರುತಿ ಸಹಜ ಕ್ರಿಯೆಯೇ ಆದರೂ ಜೀವನದ ಒ೦ದು ಭಾಗ .
    ಜನರಿಗೆ (ಭಾರತದಲ್ಲಿ) ಅತ್ರುಪ್ತಿಯನ್ನು ಮುಚ್ಚಿಕೊ೦ಡು ಬದುಕುವುದು ದೊಡ್ಡತನ ಎನಿಸಬಹುದು.ತ್ಯಾಗ ಎ೦ದೆಲ್ಲಾ ಹೇಳುತ್ತಾರೆ.ನಿಜಕ್ಕೂ ಅದು ತ್ಯಾಗವೇ? ಎ೦ಬ ಅನುಮಾನ ಕಾಡುತ್ತದೆ
    ರಾಣಿಯ ಕಥೆ ಮನಕಲಕುವುದಕ್ಕೆ.ಇದೊ೦ದು ಕಾರಣ.ಜೊತೆಗೆ ಆಕೆ ರಾಣಿ ಆಕೆಯ ಖಾಸಗೀ ಬದುಕು ಖಾಸಗಿಯಲ್ಲ.ನಿ೦ತರೂ ಕೂತರೂ ಕೇ೦ದ್ರಬಿ೦ದುವಾಗುವ ಆಕೆಗೆ ವ್ಯಕ್ತಿಗತ ಎನ್ನುವುದು ಏನೂ ಇರುವುದಿಲ್ಲ
    ಸ್ವಚ್ಚ೦ದವಾಗಿ ಬದುಕಬೇಕೆ೦ದುಕೊ೦ಡವಳಿಗೆ ಕೈದಿಯ೦ತೆ ಬದುಕುವುದು ರಾಣೀ ಪಟ್ಟದ ಅನಿವಾರ್ಯತೆ.ಕಥೆ ಕುತೂಹಲಕಾರಿಯಾಗಿ ಮೂಡಿ ಬರುತ್ತಿದೆ.
    ಎಲ್ಲಾ ಭಾಗಗಳನ್ನೂ ಒ೦ದೇ ಗುಕ್ಕಿಗೆ ಓದಿಬಿಟ್ಟೆ .ಮು೦ದಿನ ಕ೦ತಿಗಾಗಿ ಕಾಯುತ್ತಾ
    ನಿಮ್ಮವ
    ಹರಿ

    ReplyDelete
  4. ಎಲ್ಲ ಭಾಗಗಲನ್ನು ಒಟ್ಟಿಗೆ ಓದಿದ್ದಿರಾ? ತುಂಬ ಥ್ಯಾಂಕ್ಸ. ಭಾರತದಲ್ಲಿ ತ್ಯಾಗ ಅನ್ನುವುದಕ್ಕಿಂತ ಸಂಯಮಕ್ಕೆ ಬಹಳ ಮಹತ್ವ ಕೊಡುತ್ತ ಬಂದಿದ್ದಾರೆ. ಸಂಯಮ ಹಾಗೂ ತ್ಯಾಗ ಎರಡೂ ಬಹಳ ಕಷ್ಟ ಆದರೂ ಕೆಲವೊಮ್ಮೆ ಅನಿವಾರ್ಯ. ಮತ್ತೊಮ್ಮೆ ಧನ್ಯವಾದ, ಆರನೆಯ ಕಂತನ್ನು ನೆನ್ನೆಯೇ ಹಾಕಿದ್ದೇನೆ.
    ಅಕ್ಷತ

    ReplyDelete