Monday, March 8, 2010

ತಾಯಿಯ ಕಣ್ಣು-೧

ತಾಯಿಯ ಕಣ್ಣು-೧

ಮೂಲ ಮರಾಠಿ ಕೃತಿ: ಪ್ರವೀಣ್.ದವಣೆ.
ಅನುವಾದ: ಅಕ್ಷತಾ.ದೇಶಪಾಂಡೆ.

ಹತ್ತನೆಯ ತರಗತಿಯಲ್ಲಿ ಮೊದಲನೆಯ ಸ್ಥಾನ ಪಡೆದ ಸಲೀಲ್‌ನನ್ನು ಅಭಿನಂದಿಸಲು ಕೈಯಲ್ಲೊಂದು ಹೂವಿನ ಗುಚ್ಛ ಹಿಡಿದು ಆತನ ಮನೆ ಹುಡುಕುತ್ತ ನಡೆದೆ. ಅಕ್ಕಪಕ್ಕದ ಕೊಳಚೆ ಪ್ರದೇಶ, ಗುಡಿಸಲುಗಳು, ಹಾಗೂ ಅಲ್ಲಿಯ ಜನರನ್ನು ನೋಡಿ ಸಲೀಲ ಇಂತಹ ಗುಡಿಸಲುಗಳೊಂದರಲ್ಲಿ ವಾಸಿಸುತ್ತಿರಬಹುದು ಅನ್ನುವುದನ್ನು ಯೋಚಿಸಲೂ ಆಗುತ್ತಿರಲಿಲ್ಲ. ಆತನ ಬಟ್ಟೆ ಬರೆ, ವರ್ತನೆ, ವ್ಯಕ್ತಿತ್ವ ನೋಡಿದರೆ ಹಾಗನಿಸುತ್ತಿರಲಿಲ್ಲ. ಹಾಗಾಗಿ ಆತನ ಮನೆಯ ಬಗ್ಗೆ ಕಟ್ಟಿದ್ದ ನನ್ನ ಕಲ್ಪನೆ ತಲೆಕೆಳಗಾಗಿತ್ತು. ಕಡೆಗೂ ಅನೇಕ ಚರಂಡಿಗಳನ್ನು ದಾಟಿ ಎಡತಾಕುತ್ತ ಒಂದು ಅರೆಬಿದ್ದ ಗುಡಿಸಲೆದುರು ಬಂದೆ.
‘ಅವನಿಲ್ಲೇ ಇರುತ್ತಾನೆ’ ಯಾರೋ ಹೇಳಿದರು. ಕತ್ತಲ ಗರ್ಭದಿಂದ ಬೆಳಕು ಹಾದು ಬಂದಂತೆ ಸಲೀಲ್ ನನ್ನ ಸ್ವರ ಕೇಳಿ ಹೊರ ಬಂದ.
‘ಸರ್, ನೀವಿಲ್ಲಿ?’ ಆತನ ದನಿಯಲ್ಲಿ ಸಂತೋಷ ಆಶ್ಚರ್ಯಗಳೆರಡೂ ಇಣುಕಿದವು.
‘ಅಭಿನಂದನೆಗಳು’ ಅನ್ನುತ್ತ ಆತನ ಕೈಯಲ್ಲಿ ಹೂಗುಚ್ಛವನ್ನಿಟ್ಟೆ, ಹಾಗೆ ನೋಡಿದರೆ ಅಭಿನಂದಿಸಲು ನನಗಾಗಲೇ ನಾಲ್ಕೈದು ದಿನ ತಡವೇ ಆಗಿತ್ತು. ಅಭಿನಂದಿಸುವವರ ಒಂದು ಸರದಿ ಈಗಾಗಲೇ ಮುಗಿದು ರೋಟಿನ್ ಆರಂಭವಾಗಿತ್ತು. ಮೊದಲನೆಯ ಸ್ಥಾನ ಪಡೆದ ಹುಡುಗನ ಮನೆ ಹೀಗೆ? ಗುಡಿಸಿಲಿನ ಪಕ್ಕದಿಂದ ಹಾದುಹೋಗುವ ರೈಲು ಹಳಿಗಳು, ಯಾವತ್ತೂ ಹೋಗುವ ಬರುವ ರೈಲುಗಳ ಕಿವಿಗಡಚಿಕ್ಕುವ ಶಬ್ದ, ಹಾಗೂ ಸತತವಾಗಿ ಕಿರುಚಾಡುವ ಲೌಡ್‌ಸ್ಪೀಕರ್‌ಗಳ ನಡುವೆ ಈತ ಅದು ಹೇಗೆ ಓದುತ್ತಿದ್ದನೋ? ಆತನನ್ನು ಮತ್ತೆಮತ್ತೆ ಅಭಿನಂದಿಸುವಾಗ ನನ್ನ ಮನಸ್ಸು ಗುಡಿಸಿಲೊಳಗಿನ ಕತ್ತಲನ್ನು ಭೇದಿಸುತ್ತ ಮತ್ತೆಮತ್ತೆ ಪ್ರಶ್ನೆಗಳ ಜಾಲದಲ್ಲಿ ಸಿಲುಕುತ್ತಿತ್ತು.
ನಾನತನ ಮನೆಗೆ ಹೋಗಿದ್ದು ಆತನಿಗೆ ಬಹಳ ಖುಷಿ ಕೊಟ್ಟಿತ್ತು. ಹಾಗೆಂದು ಆತ ಮತ್ತೆಮತ್ತೆ ಹೇಳಿದ ಕೂಡ. ನನಗಾಗಿ ಚಹಾ ಮಾಡಲು ಆತ ಒಳಹೊರಟಾಗ ನಾನು ನಯವಾಗಿಯೇ ನಿರಾಕರಿಸಿದ್ದೆ. ಆದರೆ ನನ್ನ ಮಾತನ್ನಾತ ಕಡೆಗಾಣಿಸುತ್ತ,
‘ಚಿಂತಿಸ ಬೇಡಿ ಸರ್, ನಾನು ತುಂಬ ಒಳ್ಳೆಯ ಚಹಾ ತಯಾರಿಸುತ್ತೇನೆ, ಕೋಳಸೆವಾಡಿಯಲ್ಲಿ ನಾನೊಂದು ಚಹಾದ ಕ್ಯಾಂಟೀನ್ ನಡೆಸುತ್ತೇನೆ ಗೊತ್ತೆ?’ ಅಂದ.
ಚಹಾದ ಹಬೆಯಿಂದ ವಾತಾವರಣ ಉಲ್ಹಸಿತವಾಯಿತು. ಮನೆಯಲ್ಲಿ ಆತನಲ್ಲದೆ ಟೈಯಪಿಂಗ್ ಕಲಿಯುತ್ತಿರುವ ಆತನ ತಂಗಿ ಹಾಗೂ ಕಿರಾಣಿ ಅಂಗಡಿಯೊಂದರಲ್ಲಿ ಕೂಲಿ ಮಾಡುತ್ತಿದ್ದ ಅವರಪ್ಪ ಇರುತ್ತಿದ್ದರು.
‘ನಿನ್ನ ತಾಯಿ?’ ಕೇಳಿದೆ.
‘ತಾಯಿ ಇಲ್ಲ ಸರ್’.
ಆತನ ಮಾತು ಕೇಳಿ ದುಖಃವಾಯಿತು, ಸ್ತಬ್ಧವಾದ ವಾತಾವರಣವನ್ನು ತಿಳಿಗೊಳಿಸುವುದು ಹೇಗೆ? ಅನ್ನುವ ಯೋಚನೆಯಲ್ಲೇ ಕೆಲ ಸಮಯ ಕಳೆದೆ. ಆತ ನಿಜವಾಗಿಯೂ ಉತ್ತಮವಾದ ಚಹಾ ತಯಾರಿಸಿದ್ದ.
ಸಲೀಲ್‌ನ ಹಾಗೂ ನನ್ನ ಪರಿಚಯ ಆತ ಹತ್ತನೆ ತರಗತಿಯ ಮಾರ್ಗದರ್ಶನ ಶಿಬಿರಕ್ಕೆ ಬರಿತ್ತಿದ್ದಾಗಿನಿಂದಲದ್ದು. ಆತ ದಿನಾ ಭೇಟಿಯಾಗುತ್ತಿದ್ದ ದಿನಗಳವು. ತನ್ನೆಲ್ಲ ಉತ್ತರ ಪತ್ರಿಕೆಗಳನ್ನು ಮತ್ತೆಮತ್ತೆ ನನ್ನಿಂದ ಪರಿಶೀಲಿಸಿಕೊಳ್ಳುತ್ತಿದ್ದ ಆತನನ್ನು ನೋಡಿ ಆತನ ಪರಿಸ್ಥಿತಿಯ ಬಗ್ಗೆ ಯಾವುದೇ ಅಂದಾಜಿರಲಿಲ್ಲ. ಹಾಗೆಂದು ನಾನಾತನಿಗೆ ಹೇಳಿದಾಗ ಆತ ಭಾವುಕನಾಗಿ,
‘ಸರ್, ನಮ್ಮ ಪರಿಸ್ಥಿತಿ ಎಲ್ಲರ ಕಣ್ಣಿಗೆ ಕಾಣಲೇ ಬೇಕೆ? ನಮ್ಮ ಕಷ್ಟ, ಬದುಕನ್ನು ನೋಡಿ ಎಲ್ಲರಿಂದ ‘ಅಯ್ಯೋ’ ಅನಿಸಿಕೊಳ್ಳುವುದರಲ್ಲೇನರ್ಥವಿದೆ? ಇವತ್ತು ಕೂಡ ನನಗೆ ಅನೇಕ ಪಾರಿತೋಷಕಗಳು ಸಿಗಲಿವೆಯಾದರೂ ನನ್ನ ಮುಂದಿನ ಓದಿಗೆ ಅವು ಸಹಾಯವಾಗಲಾರವು, ಅದಕ್ಕಾಗಿ ನಾನೇ ಕಷ್ಟ ಪಡಬೇಕಿದೆ. ಟೆಲಿವಿಜನ್‌ನವರು ಬಂದು ಹೋದರು, ಯಾವುದೋ ಕ್ಲಬ್ಬಿನ ಅಧ್ಯಕ್ಷರಂತೂ ಅವರ ಕಾರ್ ಒಳಗೆ ಬರುವುದಿಲ್ಲವೆಂದರಿತು ಒಳಗೆ ಬರುವ ಗೊಡವೆಗೇ ಹೋಗದೆ ಹಾಗೇ ಹೊರಟು ಹೋದರು. ಸರ್, ಪರಿಸ್ಥಿತಿ ಮನುಷ್ಯನನ್ನು ಇರುವುದಕ್ಕಿಂತ ಹೆಚ್ಚು ದೊಡ್ಡವನನ್ನಾಗಿ ಮಾಡುತ್ತದೆ’ ಅಂದ.
ಸಲೀಲ್‌ನ ಹೊಳಪು ಆತನ ಜಾಣತನಕ್ಕಷ್ಟೇ ಸೀಮಿತವಾಗಿರದೆ ಅದು ಆತನ ಪ್ರತಿಯೊಂದು ವಾಕ್ಯದಿಂದಲೂ, ಆತನ ಕಣ್ಣಿನಿಂದಲೂ ಹೊರಸೂಸುತ್ತಿತ್ತು.
‘ಎಲ್ಲಿಂದ ಕಲಿತೆ ಇದನ್ನೆಲ್ಲ?’ ತಡೆಯಲಾರದೆ ಕೇಳಿದೆ.
‘ಅಕ್ಕಪಕ್ಕದ ಮಕ್ಕಳಿಂದ ಸರ್’ ಅಂದ.
ಅರ್ಥವಾಗದೆ ಅವನನ್ನು ಹಾಗೇ ನೋಡಿದೆ.
ಇವರುಗಳು ಯಾವ ಕೆಲಸಕ್ಕೂ ಬಾರದ ಮಕ್ಕಳು ಸರ್, ಯಾವತ್ತು ನೋಡಿದರೂ ಒಂದೋ ಇಸ್ಪಿಟ್ ಆಡುತ್ತಿರುತ್ತಾರೆ ಇಲ್ಲವೆ ಕುಡಿದು ಜಗಳ ಕಾಯುತ್ತಿರುತ್ತಾರೆ, ಸಮಯ ಹಾಳು ಮಾಡುವುದೊಂದೇ ಇವರಿಗಿರುವ ಕೆಲಸ. ಓದಕ್ಕೆ ಬರೀಯಕ್ಕಂತೂ ಮೊದಲೇ ಬರೋಲ್ಲ, ಆ ಹಬ್ಬ ಈ ಹಬ್ಬ ಅನ್ನುತ್ತ ಜನರಿಂದ ದೇಣಿಗೆಯ ರೂಪದಲ್ಲಿ ಹಣ ಕಿತ್ತು ಕಂಠಪೂರ್ತಿ ಕುಡಿದು ರಾತ್ರಿಯೆಲ್ಲ ಎಲ್ಲಂದರಲ್ಲಿ ಬಿದ್ದಿರುತ್ತಾರೆ. ಇದನ್ನೆಲ್ಲ ನೋಡುತ್ತ ಬೆಳೆದ ನಾನು ಅವರಂತಾಗಬಾರದೆಂದು ನಿರ್ಧರಿಸಿದೆ. ಏಳನೆಯ ತರಗತಿಯಲ್ಲಿದ್ದಾಗ ತೆಗೆದುಕೊಂಡ ಈ ನಿರ್ಧಾರ ನನ್ನನ್ನಿಂದು ಇಷ್ಟೆತ್ತರಕ್ಕೆ ಬೆಳೆಸಿತು ಸರ್, ಏಳನೆಯ ತರಗತಿಯಲ್ಲಿದ್ದಾಗಲೇ ನಿಮೋನಿಯಾದಿಂದ ನನ್ನ ತಾಯಿ ತೀರಿಕೊಂಡರು, ಇಲ್ಲೇ ಸಿವಿಲ್ ಆಸ್ಪತ್ರೆಯಲ್ಲಿ’ ಅಂದ.
ಈ ಪರಿಸ್ಥಿತಿ ಕೂಡ ಬದಲಾಗಬಹುದು ಅನ್ನುವ ಆಶ್ವಾಸನೆಯೊಂದನ್ನೇ ನಾನಾಗ ಆತನಿಗೆ ಕೊಟ್ಟಿದ್ದೆ. ಅದಕ್ಕಾತ ತಕ್ಷಣ,
‘ಬದಲಾಗ್ತಿದೆ ಸರ್, ಬಡತನದ ಬಗ್ಗೆ ಯೋಚಿಸುವುದಕ್ಕೆ ಸಮಯವೆಲ್ಲಿದೆ? ಅಂದ. ಆತನ ಮಾತಿಗೆ ನಾನು ಕಷ್ಟಪಟ್ಟು ಕಣ್ಣೀರು ತಡೆದೆ. ಹಾಗೆ ನೋಡಿದರೆ ನನ್ನ ಕಣ್ಣುಗಳು ತುಂಬಿ ಬರುವುದು ಬಹಳ ಕಡಿಮೆ, ಹೃದಯದಲ್ಲಿ ಅವಿತಿಟ್ಟ ಕಣ್ಣೀರು ಕಣ್ಣುರೆಪ್ಪೆಗಳನ್ನು ತೋಯಿಸುವುದು ಬಹಳ ವಿರಳ.

1 comment: