Sunday, March 21, 2010

ಅನಂತ ವೇದನೆಯ ರಾಣಿ-1

ಅನಂತ ವೇದನೆಯ ರಾಣಿ-1

ಇದು ಫ಼್ರಾಂನ್ಸ್(france) ನ ರಾಣಿ ಮಾರಿ ಆಂತುಆನೇತ್ ಳ ಮನಕಲುಕುವ ಕಥೆ. ಅನೇಕರಿಗೆ ಗೊತ್ತಿರುವ ಕಥೆಯಾದರೂ ಮರಾಠಿಯ ಉದಯೋನ್ಮುಖ ಕಥೆಗಾರರಾದ ಶ್ರೀ.ಅಶುತೋಷ.ಉಕಿಡವೆ ಅವರು ರಾಣಿಯ ಕಥೆಯನ್ನು ಮೂವರು ವಿಭಿನ್ನ ಮಹಿಳೆಯರ ದೃಷ್ಟಿಕೋನದಿಂದ ಚಿತ್ರಿಸಿದ್ದಾರೆ. ನಾನು ಈ ಕಥೆಯನ್ನು ಕನ್ನಡಕ್ಕೆ ಅನುವಾದಿಸಿ ನಿಮ್ಮೆದುರು ಇಡುತ್ತಿದ್ದೇನೆ, ಇದೊಂದು ನೀಳ್ಗಥೆ ಹಾಗೂ ಮೂರ್ನಾಲ್ಕು ಸಂಪಾದಕರು ರಿಜೆಕ್ಟ ಮಾಡಿರುವಂತಹ ಕಥೆ ಹಾಗಾಗಿ ಯಾವುದೇ ಪತ್ರಿಕೆಯಲ್ಲೋ ಸಾಪ್ತಾಹಿಕದಲ್ಲೋ ಅಚ್ಚಾಗಲಿಲ್ಲ.

ಮೂಲ ಮರಾಠಿ: ಅಶುತೋಷ್.ಉಕಿಡವೆ
ಕನ್ನಡಕ್ಕೆ:ಅಕ್ಷತಾ.ದೇಶಪಾಂಡೆ.


ಸುಚಿತ್ರ:
ಚಾರ್ಲ್ಸ ಬಿಟ್ಟು ಸುಮಾರು ಒಂದು ಘಂಟೆಯಾದರೂ ಸ್ವಲ್ಪ ಸಮಯದ ಹಿಂದೆ ನೋಡಿದ ಆ ದೃಷ್ಯ ಮನಃಪಟಲದಿಂದ ಇನ್ನೂ ದೂರ ಸರಿಯಲೊಲ್ಲದು. ಏರ‍್‌ಪೋರ್ಟಿನಿಂದ ಯುನಿವರ್ಸಿಟಿಗೆ ಕರೆದೊಯ್ಯಲು ಬಂದ ವಾಹನ ಹತ್ತಲು ಮುಖ್ಯ ರಸ್ತೆ ದಾಟಬೇಕಿತ್ತು, ಇನ್ನೇನು ವಾಹನ ಹತ್ತ ಬೇಕು ಅನ್ನುವಷ್ಟರಲ್ಲಿ ಸಿಗ್ನಲ್ ಕೆಂಪು ನಿಶಾನೆ ತೋರಿಸಿದ್ದರಿಂದ ಸಾಮಾನು ಹೊರುತ್ತ ಅಲ್ಲೇ ನಿಂತಿದ್ದಾಗ ಸಿಕ್ಕ ಸಮಯವನ್ನು ಉಪಯೋಗಿಸಿಕೊಳ್ಳುತ್ತ ಯುವ ಜೋಡಿಯೊಂದು ಒಬ್ಬರನ್ನೊಬ್ಬರು ತಬ್ಬಿಕೊಂಡಿತು. ಅನೇಕ ವರ್ಷಗಳಿಂದ ನಾನು ಫ಼್ರೆಂಚ್ ಸಂಸ್ಕೃತಿಯ ಅಭ್ಯಾಸ ನಡೆಸಿದ್ದರೂ, ಇಲ್ಲಿಯ ಕಲ್ಚರಲ್ ಸೆಂಟರ್‌ನಲ್ಲಿ ಪಾಠ ಹೇಳಿ ಕೊಡುತ್ತಿದ್ದರೂ, ಇದಕ್ಕೂ ಮುನ್ನ ಅನೇಕ ಸಲ ಪ್ಯಾರಿಸ್ ತಿರುಗಾಡಿ ಬಂದಿದ್ದೇನಾದರೂ ಇಲ್ಲಿಯ ನಿತ್ಯದ ದೃಷ್ಯಗಳು ಕಣ್ಣಿಗೆ ಆಗಲೂ ತಂಪೆನಿಸಲಿಲ್ಲ ಹಾಗೂ ಇಗೂ ತಂಪೆನಿಸಲಾರವು. ನಮ್ಮ ಮೇಡಂ ಮಾತ್ರ ಶಾಂತವಾಗಿದ್ದಾರೆ, ಅವರಿಗೆ ಇಂತಹ ಪ್ರಸಂಗಗಳೇನೂ ಹೊಸತಲ್ಲ. ಮಾವಿನ ಕಾಯಿಗೆ ಉಪ್ಪಿನಕಾಯಿಯ ನಂಟಿದ್ದಹಾಗೆ ಅಥವಾ ಆಲಿವ್ ಹಣ್ಣುಗಳನ್ನು ಸಾಕಷ್ಟು ವರ್ಷ ವೆನಿಗರ್‌ನಲ್ಲಿ ನೆನೆಸಿಟ್ಟ ಹಾಗೆ ಮೇಡಂ ಫ಼್ರೆಂಚ್ ಸಂಸ್ಕೃತಿಯಲ್ಲಿ ಬೆರೆತುಹೋಗಿದ್ದಾರೆ. ಆಗ ನಡೆದಿದ್ದ ಆ ಪ್ರೇಮಿಗಳ ಮುಕ್ತ ವಿಲಾಸ ಇವರೂ ನೋಡಿದ್ದರೂ ನೋಡದ ಹಾಗೆ ವರ್ತಿಸಲಿಲ್ಲ. ನಾಟಕೀಯತೆ ಅವರ ರಕ್ತದಲ್ಲೇಯಿಲ್ಲ, ಕಣ್ಣೆದುರು ನಡೆಯುವ ಘಟನೆಯನ್ನು ನೋಡುವುದು, ಅದನ್ನು ಸ್ವೀಕರಿಸುವುದು, ತನಗೆ ಸರಿ ಅನಿಸಿದರೆ ಮಾತ್ರ ಅದರ ಬಗ್ಗೆ ಯೋಚಿಸುವುದು ಇಲ್ಲವಾದರೆ ಆ ಘಟನೆಯನ್ನು ಮರೆತುಬಿಡುವುದು. ಯಾವುದೇ ಘಟನೆಗೆ ಸ್ಪಷ್ಟವಾದ ಪುರಾವೆ ಇಲ್ಲದಿದ್ದಾಗ ಅದರ ಬಗ್ಗೆ ಮಾತನಾಡಬಾರದು ಅನ್ನುವುದು ಅವರ ನಿಲುವು. ಎಂತಹ ದೊಡ್ಡ ಗುಣ. ಪರಿಚಯದಲ್ಲಿ ಕೆಲವರಿಗೆ ಮೇಡಂ ನವರ ಈ ಸ್ವಭಾವ ಹಿಡಿಸುವುದಿಲ್ಲ, ಆದರೆ ನಾನು ಮಾತ್ರ ಅವರ ಈ ಸರಳ, ಸ್ವಚ್ಛ ಸ್ವಭವವನ್ನೇ ಇಷ್ಟಪಡುವುದು. ನಿಜಕ್ಕೂ ನಾನವರನ್ನು ಮೆಚ್ಚುತ್ತೇನೆ. ಅದೆಲ್ಲ ಇರಲಿ, ನಾಲ್ಕು ದಿನಗಳ ನಂತರ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಯೋಚಿಸಿ ನನಗೆ ತಲೆಬಿಸಿಯಾಗಿದೆ. ಕೆಲವೇ ದಿನಗಳಲ್ಲಿ ಸೊರಬೋನ್ನಾ ಯುನಿವರ್ಸಿಟಿಯಲ್ಲಿ ಒಂದು ದೊಡ್ಡ ಕಾರ್ಯಕ್ರಮ ನಡೆಯಲಿದೆ, ಫ್ರೆಂಚ್ ಇತಿಹಾಸದಲ್ಲಿ ಹೆಸರುವಾಸಿಯಾದ ಓರ್ವ ಐತಿಹಾಸಿಕ ವ್ಯಕ್ತಿಯನ್ನು ತಮ್ಮ ಬೌದ್ಧಿಕ ಕ್ಷಮತೆಗೆ ತಕ್ಕಂತೆ ಆರಿಸಿ ಆ ವ್ಯಕ್ತಿಯನ್ನು ವಿಶ್ಲೇಷಣಾತ್ಮಕ ರೂಪದಿಂದ ಅಭ್ಯಸಿಸಿ ನಾಟಕೀಯ ರೀತಿಯಲ್ಲಿ ಸಾದರಪಡಿಸುವಂತಹ ಒಂದು ಕಾರ್ಯಕ್ರಮವದು. ಭಾಷೆ ಮಾತ್ರ ಫ಼್ರೆಂಚ್ ಇರಬೇಕು ಅನ್ನುವುದೊಂದೇ ಕಟ್ಟುಪಾಡು. ಫ್ರಾಂಕ್ಫೋನಿ ದೇಶದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅನೇಕ ವಿದ್ವಾಂಸರು ಸೋರಬೊನ್ನಾ ಯುನಿವರ್ಸಿಟಿಯಲ್ಲಿ ಸೇರಿದ್ದಾರೆ. ಫ಼್ರಾಂಕ್ಫ಼ೋನಿ ದೇಶದ ವಿಶೇಷತೆಯೇನು ಗೊತ್ತೇ? ಫ್ರೆಂಚ್ ಆ ದೇಶದ ಜನತೆಯ ಮಾತ್ರುಭಾಷೆಯಲ್ಲದಿದ್ದರು ಅದು ಅಲ್ಲಿಯೇ ಬೆಳೆದು ಫ಼ಲವತ್ತಾಗಿರುವುದಲ್ಲದೆ ಆ ಭಾಷೆಯ ಸಾಕಷ್ಟು ಅಧ್ಯಯನ ಈ ದೇಶದಲ್ಲೇ ಆಗಿದೆ. ಇರಲಿ. ನಿಜ ಹೇಳಬೇಕೆಂದರೆ ಸಂಶೋಧನೆ ಮಾಡುವುದು, ಅದಕ್ಕೆ ಭಾಷೆಯ ಸುಂದರ ಲೇಪನ ಹಚ್ಚಿ ಆ ಪೇಪರನ್ನು ಸೆಮಿನಾರ್‌ನಲ್ಲಿ ಸಾದರಪಡಿಸುವುದು ನನ್ನ ಇಷ್ಟದ ಕೆಲಸಗಳೇ. ಎಮ್.ಫ಼ಿಲ್ ತನಕ ಇದನ್ನೇ ಮಾಡುತ್ತ ಬಂದಿದ್ದೇನೆ. ಈ ಕಾರ್ಯಕ್ರಮದಲ್ಲಿ ನಮ್ಮ ನಿಭಂದ ಉತ್ತಮವಾದದ್ದು ಅಂತ ಸಾಬೀತಾದರೆ ನಮ್ಮ ಕಲ್ಚರಲ್ ಸೆಂಟರ್‌ನ ಯಾವುದೇ ಪ್ರಾಜೆಕ್ಟಗಾಗಿ ಮುಂದಿನ ಐದು ವರ್ಷಗಳ ತನಕ ಫ಼್ರೆಂಚ್ ಸರಕಾರದಿಂದ ಸ್ಕಾಲರ್ಶಿಪ್ ದೊರೆಯುವ ಸಾಧ್ಯತೆಯಿದೆ. ವ್ಯಯಕ್ತಿಕ ಸನ್ಮಾನಕ್ಕಿಂತ ನಮ್ಮ ಮೇಡಂನವರಿಗೆ ಈ ಬಹುಮಾನದ ಆಕರ್ಷಣೆಯೇ ಹೆಚ್ಚಿರಬೇಕು ಅನಿಸುತ್ತದೆ. ಅವರೇ ಅಲ್ಲವೆ ನಮ್ಮ ಸೆಂಟರ್‌ನ ಮುಖ್ಯಸ್ಥರು. ನನಗೆ ನಮ್ಮ ಮೇಡಂನವರ ಮೇಲೆ ಸಂಪೂರ್ಣ ನಂಬಿಕೆಯಿದೆ, ಅಲ್ಲದೆ ಈ ಕೆಲಸಕ್ಕಾಗಿ ಅವರು ನನ್ನ ಸಹಾಯ ಬೇಡಿರುವುದು ನನಗಾಗಿ ದೊಡ್ಡ ಸನ್ಮಾನವೇ ಆಗಿದೆ. ಒಂದು ಕಾಲದಲ್ಲಿ ನಾನು ಇವರದ್ದೇ ವಿದ್ಯಾರ್ಥಿನಿಯಾಗಿದ್ದೆನಲ್ಲದೆ ಈಗ ಅವರ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಈ ಸ್ಪರ್ಧೆಗಾಗಿ ಅವರು ನನ್ನನ್ನು ಆಯ್ಕೆ ಮಾಡಿಕೊಡಿದ್ದಕ್ಕೆ ಎರಡು ಕಾರಣಗಳನ್ನು ಕೊಟ್ಟಿದ್ದರು, ಒಂದೋ ನನ್ನ ಧ್ವನಿ ಅದಕ್ಕೆ ನೆನಪಿನಲ್ಲುಳಿಯುವಂತಹ ಏರಿಳಿತವಿದೆ, ವಿಶೇಷವಾಗಿ ಡ್ರಾಮಾಟಿಕ್ ಹೈಪಿಚ್. ಹಾಗೂ ಎರಡನೆಯದಾಗಿ ಭಾವನಾತ್ಮಕವಾಗಿ ವಿಷಯವನ್ನು ಪ್ರಸ್ತುತಪಡಿಸುವ ನನ್ನ ಪರಿ.

‘ಮಾನವನ ಅಸ್ತಿತ್ವ ಅವನ ಭಾವನೆಗಳ ಹಾಗೂ ಸಂವೇದನೆಗಳ ಸಹಿತ ಸ್ವೀಕರಿಸುವ ನಿನ್ನ ವಿಚಾರಶೈಲಿಯು ಈ ಪೇಪರ್‌ಗೆ ಒಂದು ಬೇರೆ ಬಣ್ಣವನ್ನೇ ಕೊಡಬಹುದು ಎಂದು ನನಗನಿಸುತ್ತದೆ’ ಅಂದಿದ್ದರು.
ಅವರು ಹಾಗಂದಿದ್ದರೂ ಪ್ರತ್ಯಕ್ಷವಾಗಿ ಮಾತ್ರ ನನ್ನ ವಿಚಾರಗಳ ನೆರಳನ್ನು ಕೂಡ ಅವರು ತಮ್ಮ ನಿಭಂದದ ಮೇಲೆ ಬೀಳಗೊಡುತ್ತಿರಲಿಲ್ಲ. ಇತ್ತೀಚೆಗೆ ನಾವಿಬ್ಬರೂ ಒಳಗೊಳಗೇ ವಿಚಿತ್ರವಾದ ಬೇಗುದಿ ಅನುಭವಿಸುತ್ತಿದ್ದೇವೆ. ನಿಭಂದವೇನೋ ನಮ್ಮ ಅಪೇಕ್ಷೆಗಿಂತ ಚನ್ನಾಗಿಯೇ ಮೂಡಿ ಬಂದಿದೆ, ಎಲ್ಲ ವಿಷಯಗಳು ಪರಸ್ಪರ ಒಂದು ಸೂತ್ರದಡಿ ಬಂಧಿತವಾಗಿವೆ, ಸತ್ಯದ ಒರೆಗೆ ಹಚ್ಚಿ ಪೋಣಿಸಿರುವ ವಿಚಾರಗಳು, ಹಳೆಯ ಫ಼್ರೆಂಚ್ ಭಾಷೆಯನ್ನು ಯೋಗ್ಯ ರೀತಿಯಲ್ಲಿ ಬಳಸಿದ್ದು ಪ್ರಭಂದ ಮಂಡಿಸುವಾಗ ಮಾತನಾಡುವ ರೀತಿ, ಮಾತಿನ ಏರಿಳಿತದ ಬಗ್ಗೆ ಲೆಕ್ಕಾಚಾರವಾಗಿ ಅತ್ಯಂತ ಜಾಣತನಾಡೀಂದ ತಯಾರಿಸಿರುವ ಆದ್ದರಿಂದ ಎಲ್ಲವೂ ಉತ್ಕೃಷ್ಟವಾಗಿದೆ. ಆದರೂ ನಿಭಂದ ಎಲ್ಲೋ ಜಾಳುಜಾಳಾಗುತ್ತಿದೆ ಎಂದೆನಿಸುತ್ತಿದೆ. ಮೇಡಂ ಏನೋ ತುಂಬ ಸಂತೋಷವಾಗಿದ್ದಾರೆ, ಆದರೆ ನಾನು ಮಾತ್ರ ಯಾವುದೋ ಅತೃಪ್ತಿಯಿಂದ ತೊಳಲಾಡುತ್ತಿದ್ದೇನೆ. ನಿಭಂದದಲ್ಲಿರುವ ವಿಚಾರಗಳು ನನ್ನವಲ್ಲ, ಅವು ನನ್ನ ಮೇಲೆ ಹೇರಲ್ಪಟ್ಟಿವೆ, ನಾನು ಅದನ್ನು ಮಂಡಿಸುವ ಕೆಲಸವನ್ನು ಮಾತ್ರ ಮಾಡುವ ಗೊಂಬೆ ಮಾತ್ರ, ಅದೂ ನಾಟಕೀಯವಾಗಿ ಓದುವ ಗೊಂಬೆ. ನಿಭಂದ ಕೆಟ್ಟದ್ದಾಗಿದ್ದರೂ ಬಹುಶಃ ಮೇಡಂನವರ ಮೇಲಿನ ಪ್ರೀತಿಗಾಗಿ ಒಂದು ಪಕ್ಷ ನಾನು ಸುಮ್ಮನಿರುತ್ತಿದ್ದೆನೇನೋ ಆದರೆ ರಾಣಿ ಅಂದರೆ ನಮ್ಮ ನಿಭಂದದ ನಾಯಕಿಯ ಮೇಲೆ ಅನ್ಯಾಯವಾಗುತ್ತಿದೆ. ನಾನು ಯಾವ ವಿಷಯದಲ್ಲಿ ಪಿ.ಹೆಚ್.ಡಿ ಮಾಡಿರುವೆನೋ ಆಕೆಯ ವ್ಯಕ್ತಿತ್ವದ ಮೇಲೆ ಅನ್ಯಾಯವಾಗುತ್ತಿದೆ, ರಾಣಿಯ ಅಸ್ತಿತ್ವ ನನಗೂ ಮೇಡಂನವರಿಗೂ ಯಾವತ್ತೂ ಅಣಕಿಸುತ್ತ ಬಂದಿದೆ. ನಮ್ಮ ನಿಭಂದದ ಮುಖ್ಯ ವಿಷಯವೇ ಅದು. ಈ ನಿಭಂದಕ್ಕೆ ನಾನವರಿಗೆ ಸೂಚಿಸಿದ್ದ ಒಳ್ಳೆಯ ಹೆಸರನ್ನವರು ಮುಲಾಜಿಲ್ಲದೆ ನಿರಾಕರಿಸಿದರು. ಯಾಕೆ? ಎಂದು ಕೇಳಿದಾಗ ಅದು ಅಷ್ಟು ಸರಿಹೊಂದುವುದಿಲ್ಲ ಅಂದರು. ‘ಅನಂತ ವೇದನೆಯ ರಾಣಿ’ ಫ಼್ರೆಂಚ್ ರಾಜ್ಯಕ್ರಾಂತಿಯಲ್ಲಿಯ ದಂಗುಬಡಿಸುವ, ಅದ್ಭುತ, ಬಹುಚರ್ಚಿತ ಹಾಗೂ ಬಿರುಗಾಳಿಯ ವ್ಯಕ್ತಿತ್ವ.
‘ಬಡವರಿಗೆ ಬ್ರೆಡ್ ಸಿಗದಿದ್ದರೆ ಕೇಕ್ ತಿನ್ನಲಿ’ ಎಂದು ಸಾರಿದ ಶ್ರೀಮಂತ ರಾಣಿ ‘ಮಾರಿ ಆಂತುಆನೇತ್’.

(ಮುಂದುವರೆಯುತ್ತದೆ).
2 comments:

  1. Akshata ravare..nimmallige modala bheti...chennaagi mana tattuva baravanige kottiri...nannadu ondu vinanthi...akshara teera achikkadaaitu...idannu swalpa doddadu maadi..

    ReplyDelete