Thursday, April 8, 2010

ಅನಂತ ವೇದನೆಯ ರಾಣಿ-೪

ಅನಂತ ವೇದನೆಯ ರಾಣಿ-೪

ಸುಚಿತ್ರ:

ಈ ನಿಭಂದಕ್ಕೆ ಸಹಾಯ ಮಾಡಲು ನಾನು ಒಪ್ಪದಿದ್ದಿದ್ದರೆ ಬಹುಶಃ ನನ್ನ ಮನಸ್ಸಿನಲ್ಲಿದ್ದ ಮೇಡಂನವರ ಪ್ರತಿಮೆಗೆ ಧಕ್ಕೆ ಬರುತ್ತಿರಲಿಲ್ಲ. ಮೇಡ್ಂನವರ ತೀಕ್ಷ್ಣ ಬುದ್ಧಿಮತ್ತೆ, ಗಂಭೀರ ವ್ಯಕ್ತಿತ್ವ, ಎಲ್ಲ ಹೆಣ್ಣುಮಕ್ಕಳಿಗೂ ಅಭಿಮಾನವೆನಿಸುವಂತಹ ಅವರ ಸಾಧನೆಗೆ ನಾನು ಬಹಳ ಮಾರು ಹೋಗಿದ್ದೆ, ಆದರೆ ಈಗದು ಸಾಧ್ಯವಾಗುತ್ತಿಲ್ಲ. ಕಾರಣ ಅವರ ಬುದ್ಧಿಮತ್ತೆಯ ಹಿಂದಿರುವ ಭಾವನೆಯ ಕೊರತೆ. ಬಹುಶಃ ಅದಕ್ಕೇ ಅವರು ಅವಿವಾಹಿತರಾಗಿಯೇ ಉಳಿದಿರಬೇಕು.

ಬಣ್ಣಬಣ್ಣದ ಹೊದಿಕೆಯ ಹಾಗಿದೆ ರಾಣಿಯ ಜೀವನ, ಅವಳ ಜೀವನದಲ್ಲಿ ಪ್ರವೇಶಿಸಿದ್ದ ಪ್ರತಿಯೊಂದು ವ್ಯಕ್ತಿಯ ಬಣ್ಣ ಅಲ್ಲಿದ್ದರೂ ಆಕೆ ತನ್ನ ಆತ್ಮದ ಬಣ್ಣವನ್ನು ಬಹು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾಳೆ ಅನ್ನುವುದನ್ನು ಮೇಡಂ ಒಪ್ಪಲೇಬೇಕು.

ಫ಼್ರೆಂಚ್ ಜನತೆಗಾಗಿ ರಾಣಿ ಏನನ್ನೂ ಮಾಡಲಿಲ್ಲ, ಆಕೆ ಮೂರ್ಖಳಿದ್ದಳು ಅನ್ನುವುದು ನಿಜವಾದರೂ ಆಕೆ ಎಂದೂ ಕ್ರೂರಳಾಗಿರಲಿಲ್ಲ. ಮೋಝಾರ್ಥನ ಜೊತೆ ಮದುವೆಯಾಗಿ ಆಕೆಯೂ ಸುಖವಾಗಿರಬಹುದಿತ್ತು. ರಾಜಕಾರಣದಲ್ಲಿ, ಲೋಕಕಲ್ಯಾಣದಲ್ಲಿ ಆಕೆ ಎಂದೂ ಮೂಗು ತೂರಿಸಲಿಲ್ಲ. ಸಾಮಾನ್ಯ ಸ್ತ್ರೀಯಂತೆ ಆಕೆ ಸಂಸಾರಸ್ಥ ಜೀವನ ನಡೆಸುತ್ತಿದ್ದಳು. ಸಿಂಹಾಸನದ, ಅಧಿಕಾರದ ಮೋಹ ರಾಣಿಗಿತ್ತು ಅನ್ನುವ ಒಂದಂಶದ ಪುರಾವೆಯೂ ಮೇಡಂನವರಿಗೆ ಎಲ್ಲೂ ಸಿಕ್ಕಿಲ್ಲ. ಚಿಕ್ಕ ವಯಸ್ಸಿನಲ್ಲೇ ಅಪರಿಚಿತ ಸಂಸ್ಕೃತಿಯ ಮನುಷ್ಯನೊಂದಿಗೆ ಆದ ವಿವಾಹ, ಅವನೊಂದಿಗೆ ಹೊಂದಿಕೊಂಡು ಹೋಗುವಾಗ ಆಕೆ ಪಟ್ಟ ಬವಣೆ, ಜೊತೆಗೆ ನಿಷ್ಕ್ರೀಯ ಪತಿ ಇವುಗಳಿಂದ ಆಕೆ ಎಷ್ಟು ಹೆದರಿರಬಹುದು! ಎಷ್ಟು ನೊಂದಿರಬಹುದು! ಆಗಿನ ಕಾಲದಲ್ಲಿ ೧೪-೧೫ ವರ್ಷದ ಹುಡುಗಿಯರು ಇಂದಿನಂತೆ ಸ್ವತಂತ್ರವಾಗಿ, ಸ್ವಚ್ಛಂದವಾಗಿರಲು ಸ್ಸಾಧ್ಯವಿರಲಿಲ್ಲ ಅನ್ನುವುದನ್ನು ಗಮನಕ್ಕೆ ತೆಗೆದುಕೊಂಡರೆ ರಾಣಿಯ ಅವಸ್ಥೆ ಅರ್ಥವಾಗುತ್ತದೆ. ವಯಸ್ಸಿನ ಹದಿನಾರನೆಯ ವರ್ಷದ ಮಹತ್ವ ಅನ್ನುವುದಕ್ಕಿಂತ ಆ ವಯಸ್ಸಿನಲ್ಲಾಗಬಹುದಾದಂತಹ ಅನಾಹುತದ ಬಗ್ಗೆ ಮಾನ್ಯತೆ ಕೊಡುವ ನಮ್ಮ ಸಂಸ್ಕೃತಿ ರಾಣಿ ಹೀಗೇಕೆ ವರ್ತಿಸಿದಳು ಅನ್ನುವುದರ ಮೇಲೆ ಬೆಳಕು ಬೀರುತ್ತದೆ. ರಾಣಿ ಕಡೆಯವರೆಗೆ ಹಸಿದೇಯಿದ್ದಳು. ಆ ಹಸಿವು ಕೇವಲ ಶರೀರ ಸುಖದ್ದಾಗಿರಲಿಲ್ಲ, ಅದರ ಜೊತೆಗೆ ಪ್ರಸ್ಥಾಪಿಸಲ್ಪಡುವ ಸಹಜೀವನದ ಬಂಧನ ಆಕೆಗೆ ಅಪರಿಚಿತವಾಗಿಯೇ ಉಳಿಯಿತು. ದೇಹ ಹಾಗೂ ಮನಸ್ಸಿನಿಂದ ದೂರವಾಗುತ್ತಿದ್ದ ಪತಿಯನ್ನಾಕೆ ಎಂದೋ ಸ್ವೀಕರಿಸಿಯಗಿತ್ತು, ಆದರೆ ಒಳತುಡಿತವನ್ನು ಮೆಟ್ಟಿ ನಿಲ್ಲುವುದು ಸಾಧ್ಯವಿತ್ತೆ? ಇಂತಹ ಪರಿಸ್ಥಿಯಲ್ಲಿ ಮುಂದೆ ಆರಂಭವಾಗಿತ್ತು ಅಲ್ಪವಯಸ್ಸಿನಲ್ಲೇ ಸುಖಕ್ಕಾಗಿ ಹುಡುಕಾಟ. ಶ್ರೀಮಂತ ರಾಜಮನೆತನಕ್ಕೆ ಸೇರಿದ್ದವಳಾದ್ದರಿಂದ ಆಕೆ ಇಂತಹ ಶೋಕಿಗಳನ್ನು ಪೂರೈಸಿಕೊಳ್ಳಬಲ್ಲವಳಾಗಿದ್ದಳು ಅನ್ನುವುದು ಅವಳ ಸುದೈವ ಹಾಗೂ ದುರ್ದೈವ ಕೂಡ. ಅವಳ ಬಿಡಿ ಬಿಡಿ ಜೀವನವನ್ನು ಒಂದು ಸೂತ್ರದಲ್ಲಿ ಬಂಧಿಸಿಡಲು ಆಕೆಗೊಂದು ಮಗು ಕೂಡ ಅನೇಕ ವರ್ಷಗಳ ಕಾಲ ಹುಟ್ಟಲಿಲ್ಲ. ಅವಳನ್ನು ಹೆದರಿಸಿ, ಬೆದರಿಸಿ ಸರಿದಾರಿಗೆ ತರುವ ಅಥವಾ ಪ್ರೀತಿಯ ನಾಲ್ಕು ಮಾತುಗಳನಾಡುವವರೂ ಯಾರೂ ಇರಲಿಲ್ಲ. ಅವಳ ತಾಯಿಯನ್ನು ಬಿಟ್ಟರೆ, ತಾಯಿಗಿಂತ ಆಸ್ಟ್ರಿಯಾದ ಮಹಾರಾಣಿ ಥೆರೇಸಾ ಎಂದೇ ಅವಳ ಪರಿಚಯ ರಾಣಿಗಿದ್ದದ್ದು. ಫ಼್ರಾನ್ಸನ ಸಿಂಹಾಸನದ ಜವಾಬ್ದಾರಿ ಹೊರುವ ಜಾಣ್ಮೆ, ಕೆಚ್ಚೆದೆ ಲೂಯಿಗಾಗಲಿ, ಅಥವಾ ಮಾರಿಗಾಗಲಿ ಇರಲಿಲ್ಲ ಅನ್ನುವುದು ಥೆರೇಸಾಗೆ ಚನ್ನಾಗಿ ಗೊತ್ತಿತ್ತು. ಆದ್ದರಿಂದ ಆಕೆ ತನ್ನ ಮಗಳಿಗೆ ಪತ್ರಗಳ ಮೂಲಕ ಸೂಚನೆಗಳನ್ನು ಕೊಡುತ್ತಿದ್ದಳು.

‘ರಾಜನ ಸಾಧಾರಣ ಬದುಕು ಎಲ್ಲರಿಗೂ ಗೊತ್ತು, ಆದ್ದರಿಂದ ನಾಳೆ ಫ಼್ರಾನ್ಸ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದರೆ ನಿನ್ನ ಈ ಖರ್ಚುಗಳ ಲೆಕ್ಕಾಚಾರಕ್ಕೆ ನೀನೇ ಉತ್ತರಿಸಬೇಕಾಗುತ್ತದೆ, ಅದಕ್ಕಾಗಿ ಪ್ರಜೆಗಳು ನಿನ್ನ ರುಂಡ ಹಾರಿಸಲಿಕ್ಕೂ ಸಾಕು’ ಎಂದೆಲ್ಲ ಎಚ್ಚರಿಸುತ್ತಿದ್ದಳು. ಆದರೆ ಇವೆಲ್ಲ ಚಿಕ್ಕ ರಾಣಿಗೆ ಹೇಗೆ ಅರ್ಥವಾಗಬೇಕು? ಕೆಲವು ವಿಷಯಗಳು ಅನುಭವದಿಂದಲೇ ಅರ್ಥವಾಗುತ್ತವೆ ಅನ್ನುವುದು ನಿಜ, ಆಗಲೇ ಮಾನವ ಅನುಭವಸ್ಥ ಅನಿಸಿಕೊಳ್ಳುತ್ತಾನೆ.

ತ್ರಿಯೋನಾದ ಹಸಿರು ಹುಲ್ಲಿನ ಮೇಲೆ ಮಲಗಿದ ರಾಣಿಗೆ ದೇಶದ ಹಿತ, ಜನ ಹಿತದ ಬಗ್ಗೆ ಯಾವುದೇ ಚಿಂತೆಯಿರಲಿಲ್ಲ ಅನ್ನುವುದಕ್ಕಿಂತ ಆ ವಿಚಾರ ಅವಳಿಗೆಂದೂ ಗೊತ್ತೇಯಿರಲಿಲ್ಲ ಅನ್ನಬಹುದು. ಈಗಿನ ಸ್ತ್ರೀಯರು ತುಂಬ ಬುದ್ಧಿವಂತರು ಅನ್ನುವುದು ಮೇಡಂನವರ ಅಂಬೋಣ. ವೈಮಾನಿಕರು, ಡಾಕ್ಟರು, ಹಾಗೂ ಮೇಡಂನವರಂತೆ ಹೊರ ಜಗತ್ತಿನಲ್ಲಿ ಹೆಸರು ಗಳಿಸಿರುವ ಸ್ತ್ರೀಯರ ಹಾಗೆ ಸಂಸಾರದ ಮಾತುಕತೆಗಳಲ್ಲಿ ಸುಖ ಕಾಣುವ ಸ್ತ್ರೀಯರು ಕೂಡ ಬಹಳಷ್ಟಿದ್ದಾರೆ. ರಾಣಿಯೂ ಅವರಲ್ಲೊಬ್ಬಳು. ಆದರೆ ಸ್ತ್ರೀ ಸಾಧನೆಯ ಕನ್ನಡಿಯಿಂದ ರಾಣಿಯನ್ನು ನೋಡುವಾಗ ಮೇಡಂ ಆಕೆಯ ಸೌಂದರ್ಯ ದೃಷ್ಟಿ ಹಾಗೂ ಆಕೆಯ ಕಲಾ ಸಂಪನ್ನತೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಅವರ ಪ್ರಕಾರ ಇವೆಲ್ಲವನ್ನೂ ದುಡ್ಡಿನಿಂದ ಕೊಳ್ಳಬಹುದು. ಆದರೆ ಮೇಡಂ, ತ್ರಿಯೋನಾದ ಅರಮನೆ ಕೇವಲ ವಿಲಾಸದ ಚೈನಿಯ ಸ್ಥಳವಾಗಿರಲಿಲ್ಲ.

ಅಲ್ಲಿ ರಾಣಿ ನಾಟ್ಯ ಪರಂಪರೆಯ ಒಂದು ಚಳುವಳಿಯನ್ನೇ ಪ್ರಾರಂಭಿಸಿದ್ದಳು. ದೇಶವಿದೇಶದ ಹೆಸರಾಂತ ಕಲಾವಿದರು ತಮ್ಮ ಕಲೆಯನ್ನು ಸಾದರಪಡಿಸಲು ಒಂದು ದೊಡ್ಡ ಥಿಯೇಟರನ್ನೇ ನಿರ್ಮಿಸಿದಳು ರಾಣಿ. ತನ್ನ ವಿನಂತಿಗೆ ಬೆಲೆಕೊಟ್ಟು ಬರುವ ಕಲಾವಿದರಿಗಾಗಿ ಉತ್ತಮವಾದ ವ್ಯವಸ್ಥೆಯನ್ನು ಏರ್ಪಡಿಸಿದ್ದಳು. ಅನೇಕ ನಾಟ್ಯ ಪ್ರಯೋಗಗಳು ಏರ್ಪಡಿಸಲ್ಪಡುತ್ತಿದ್ದವು. ಕೆಲವು ನಾಟಕಗಳಲ್ಲಿ ರಾಣಿಯೂ ಅಭಿನಯಿಸಿದ್ದಳು. ತನ್ನ ಅಪೂರ್ಣ ಕನಸು, ಆಕಾಂಕ್ಷೆಗಳನ್ನಾಕೆ ತನ್ನ ಪಾತ್ರಗಳ ಮೂಲಕ ಸಾದರಪಡಿಸುತ್ತಿದ್ದಳು. ಕಲಾವಿದರಿಗೆ ತಮ್ಮ ಕಲೆಯನ್ನು ಸಾದರಪಡಿಸಲು ಹುರುಪು ಬರಲೆಂದು ಅಕ್ಕಪಕ್ಕದ ಪರಿಸರವನ್ನು ಪ್ರೇಕ್ಷಣಿಯ ಹಾಗೂ ರಮಣೀಯವಾಗಿ ಮಾರ್ಪಡಿಸಿದಳು. ಆಗಾಗ ನಾಟ್ಯ ಶಿಬಿರಗಳನ್ನು ಆಯೋಜಿಸಿ ನಾಟ್ಯ ಶಾಲೆಗಳನ್ನು ನಿರ್ಮಿಸಿದಳು. ಮೇಡಂ ನಿಮ್ಮ ದೃಷ್ಟಿಯಲ್ಲಿ ಇವಕ್ಕೆಲ್ಲ ಜನತೆಯ ಹದಿನಾಲ್ಕು ಸಾವಿರ ಪೌಂಡ್ ಖರ್ಚಾಯಿತು, ಆದರೆ ನನ್ನ ದೃಷ್ಟಿಯಲ್ಲಿ ಅನೇಕ ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ದೊರಕಿತು. ಮುಂದೆ ಫ಼್ರಾನ್ಸನಲ್ಲಿ ವಿಕಸಿತವಾದ ಥಿಯೇಟರ್ ಮುವ್‌ಮೆಂಟ್‌ನ ಅಡಿಪಾಯ ರಾಣಿಯೇ ಭದ್ರಪಡಿಸಿದಳು.

ರಾಣಿಗೆ ಸಿಂಹಾಸನದ ಆಸೆ ಇದ್ದಿದ್ದರೆ, ಅಥವಾ ತನ್ನ ತಾಯಿಯಂತೆ ಕುಟಿಲ ನೀತಿಗಳನ್ನು ಬಲ್ಲವಳಾಗಿದ್ದರೆ ಆಕೆ ಫ಼್ರಾನ್ಸಿನ ದರ್ಬಾರಿನಲ್ಲಿ ದೊಡ್ಡ ಅಧಿಕಾರಿಗಳನ್ನು ಅಂತೆಯೇ ಮುಂದೆ ಕ್ರಾಂತಿಯ ಕಾಲದಲ್ಲಿ ಲೋಕಪ್ರತಿನಿಧಿಗಳನ್ನು ಸೇರಿಸಿಕೊಳ್ಳಬಹುದಿತ್ತು. ಆದರೆ ಆ ಸಾಮಾನ್ಯ ಹೆಂಗಸಿಗೆ ಕುಟಿಲ ನೀತಿಗಳನ್ನು ರಚಿಸಲಾಗಲೇಯಿಲ್ಲ. ರಾಜನು ರಾಜ್ಯ ಕಾರುಭಾರನ್ನು ನೋಡಿಕೊಳ್ಳುವುದು ಹಾಗೂ ರಾಣಿ ಮಕ್ಕಳನ್ನು ಹಾಗೂ ಮನೆತನದ ರೀತಿನೀತಿಗಳನ್ನು ಸಂಭಾಳಿಸಿಕೊಂಡು ತಮ್ಮಹವ್ಯಾಸ ಹಾಗೂ ಕಲೆ ಜೋಪಾನ ಮಾಡುವುದು ಅನ್ನುವುದು ಸಮಾಜದ ಪ್ರತಿಯೊಂದು ಸಮೂಹದಲ್ಲಿ, ರಾಜ್ಯದಲ್ಲಿ ಪ್ರಂಪರಾಗತವಾಗಿ ನಡೆದು ಬಂದಿದೆ. ಇಂದು ಕೂಡ ಎಷ್ಟೋ ಉದ್ಯೋಗಿಗಳ, ರಾಜಕಾರಣಿಗಳ ಪತ್ನಿಯರು ತಮ್ಮ ಪತಿಯ ಕಾರ್ಯದಲ್ಲಿ ಸ್ವಲ್ಪವೂ ಆಸಕ್ತಿಯಿಲ್ಲದವರು ವಿವಿಧ ಕಲಾಕ್ಷೇತ್ರದಲ್ಲಿ ಸ್ವತಂತ್ರವಾಗಿ ಸಾಧನೆ ಮಾಡುವುದನ್ನು ನೋಡುತ್ತೇವೆ. ಹೀಗಿದ್ದ ಮೇಲೆ ಹದಿನೆಂಟು ವರ್ಷದ ರಾಣಿ ಮಾತ್ರ ತನ್ನ ಪತಿ ಜೀವಂತವಾಗಿರುವಾಗ, ಆರೋಗ್ಯವಂತನಾಗಿರುವಾಗ ರಾಜ್ಯವನ್ನಾಳಬೇಕು ಅನ್ನುವ ಅಪೇಕ್ಷೆಯೆಕೆ?

ರಾಣಿಗೆ ಸ್ವೈರಾಚಾರಿ ಅನ್ನುವ ಲೇಬಲ್ ಅಂಟಿಸಿ ಫ಼್ರೆಂಚ್ ಜನತೆಯ ದುಖಃಕ್ಕೆ ರಾಣಿಯೇ ಕಾರಣ ಅನ್ನುವಂತಹ ಆರೋಪಗಳನ್ನು ರಾಣಿಯ ಮೇಲೆ ಹೊರಿಸುವ ಮೇಡಂನವರ ದೃಷ್ಟಿಕೋನ ಒನ್ ವೇ ಹಾಗೂ ಹಟಮಾರಿತನದ್ದು ಅನಿಸುತ್ತದೆ.

6 comments:

 1. ರಾಣಿಯ ಕಥೆ ನಿಜಕ್ಕೂ ಸೋಜಿಗವೆನಿಸುತ್ತದೆ
  ನಿಮ್ಮ ಶೈಲಿ ಇನ್ನೂ ಕುತೂಹಲವನ್ನು, ಭಾವನೆಗಳನ್ನು ಮೂಡಿಸುತ್ತದೆ

  ReplyDelete
 2. ನೀವು ಕಥೆಯ ಪ್ರತಿಯೊಂದು ಕಂತನ್ನೂ ಅಷ್ಟು ಇಷ್ಟ ಪಟ್ಟು ಓದುತ್ತಿರುವುದನ್ನು ನೋಡಿ ಬಹಳ ಸಂತೋಷವಾಗುತ್ತದೆ ಡಾ.ಗುರುಮೂರ್ತಿಯವರೆ. ಮತ್ತೊಮ್ಮೆ ತುಂಬ ಥ್ಯಾಂಕ್ಸ.
  ಅಕ್ಷತ.

  ReplyDelete
 3. ರೀ akshata..,
  ನನಗಂತೂ ಈ ಲೇಖನ ಸ್ವಲ್ಪ ಮಂದವಾದಂತೆ ಕಾಣುತ್ತಿದೆ,ಮೊದಲಿದ್ದಷ್ಟು ಸೊಗಸು ಇಲ್ಲಿಲ್ಲ.
  ಚೆನ್ನಾಗಿ ಮೂಡಿಬರುತ್ತಿದೆ ಇನ್ನೂ ಚೆನ್ನಾಗಿ ಬರೆಯಲು ಪ್ರಯತ್ನಿಸಿ.. ಶುಭವಾಗಲಿ.

  ReplyDelete
 4. ನಮಸ್ಕಾರ,
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ಅನುವಾದದಲ್ಲಿ ಕೆಲವು ಅನಿವಾರ್ಯತೆಗಳನ್ನು ಪಾಲಿಸಬೇಕಾಗುತ್ತದೆ ಅಲ್ಲವೆ? ನನ್ನ ಸ್ವಂತ ಲೇಖನವಾಗಿದ್ದರೆ ಅಲ್ಲಿ ಇಲ್ಲಿ ಸ್ವಲ್ಪ ಬದಲಾಯಿಸಬಹುದಿತ್ತೇನೋ, ಆದರೂ ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆವಹಿಸಲು ಪ್ರಯತ್ನಿಸುತ್ತೇನೆ.
  ಅಕ್ಷತ.

  ReplyDelete
 5. ಅಕ್ಷತಾ ಕಥೆ ಚನ್ನಾಗಿ ಮೂಡಿ ಬರ್ತಿದೆ...ಮುಂದುವರೆಯಲಿ...ನನ್ನ ವಿನಂತಿ...ಅಕ್ಷರ ಸೊಲ್ಪ ದೊಡ್ಡದಿದ್ದರೆ ಒಳ್ಲೆಯದೇನೋ....

  ReplyDelete
 6. ಹಾಯ್,
  ನಿಮ್ಮ ಪ್ರತಿಕ್ರಿಯೆಗೆ ತುಂಬ ಧನ್ಯವಾದ ಜಲನಯನ ಅವರೆ, ನೀವು ಕಳೆದ ಸಲ ಹೇಳಿದಾಗ ನಾನು ಫ಼ಾಂಟನ್ನು ಸ್ವಲ್ಪ ದೊಡ್ಡದು ಮಾಡಿ ಟೈಪ್ ಮಾಡಿದೆ ಆದರೆ ಬ್ಲಾಗನ್ನು ಪಬ್ಲಿಶ್ ಮಾಡೋವಾಗ ಅಕ್ಷರಗಳು ಓವರ್‌ಲ್ಯಾಪ್ ಆಗಿ ಎಲ್ಲ ಗಡಿಬಿಡಿಯಾಯಿತು, ಹಾಗಾಗಿ ಮತ್ತೆ ಸಣ್ಣ ಫ಼ಾಂಟನ್ನೇ ಇಡಬೇಕಾಯಿತು, ನನ್ನ ಬ್ಲಾಗಿನಲ್ಲಿ ಇದೊಂದೇ ಡ್ರಾಬ್ಯಾಕ್ ಇರುವುದಾದರೆ ಪ್ಲೀಸ್ ಅದನ್ನು ಅನುಸರಿಸಿಕೊಂಡು ಹೋಗುತ್ತೀರಿ ಎಂದು ನಂಬಿದ್ದೇನೆ.
  ಅಕ್ಷತ.

  ReplyDelete