Monday, March 8, 2010

ತಾಯಿಯ ಕಣ್ಣು-೨

ತಾಯಿಯ ಕಣ್ಣು-೨

ನನ್ನ ಹಾಗೂ ಅಕ್ಕಪಕ್ಕದ ಕ್ಯಾಂಪಸ್ಸಿನಲ್ಲಿ, ಕ್ಯಾಂಪಸ್ಸಿನ ಹೊರಗೆ ಅನವಶ್ಯಕ ಮಾತುಕತೆಯಲ್ಲಿ ತಮ್ಮನ್ನು ತೊಡಗಿಸಿಳ್ಳುವ ವಿದ್ಯಾರ್ಥಿಗಳು ನನಗಾಗ ನೆನಪಾದರು, ಕಾಡು ಕೋಣದಂತೆ ಬೈಕ್ ಸವಾರಿ ಮಾಡುವ ವಿದ್ಯಾರ್ಥಿಗಳು, ದೇಣಿಗೆ ಹಾಗೂ ಫ಼ೀಸ್ ತುಂಬಿದ ಮೇಲೂ ಕ್ಲಾಸಿನಲ್ಲಿ ಕುಳಿತುಕೊಳ್ಳುವುದು ಮಹಾ ಪಾಪ ಅಂದುಕೊಳ್ಳುವ ಅಸಂಖ್ಯ ವಿದ್ಯಾರ್ಥಿಗಳು! ಸಲೀಲ್ ಕೂಡ ಅದೇ ವಯಸ್ಸಿನವನು. ಆ ವೇಳೆಗೆ ಸಲೀಲ್‌ನಂತಹ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳೂ ನೆನಪಾಗದೇಯಿರಲಿಲ್ಲ.

ನಾನಾತನನ್ನು ಒಮ್ಮೆ ನನ್ನ ಕ್ಲಾಸಿಗೆ ಬಂದು ನನ್ನ ಮಕ್ಕಳೊಂದಿಗೆ ಮಾತನಾಡುವಂತೆ ಕೇಳಿಕೊಂಡೆ, ಆದರೆ ನನ್ನ ಬೇಡಿಕೆಯನ್ನಾತ ನಯವಾಗಿಯೇ ನಿರಾಕರಿಸಿದ.

‘ಬೇಡ ಸರ್, ನಾನಷ್ಟು ದೊಡ್ಡವನಲ್ಲ, ಹೀಗೆ ನನ್ನಂತೆ ಕಷ್ಟ ಪಡುವ ಅನೇಕ ವಿದ್ಯಾರ್ಥಿಗಳಿದ್ದಾರೆ. ನಮ್ಮ ಪ್ರತಿಯೊಬ್ಬರ ಮನಸ್ಸಿನ ಕಾವಲುಗಾರ ಎಚ್ಚರದಿಂದಿದ್ದರೆ ಇವೆಲ್ಲ ಯಾರೂ ಹೇಳಿಕೊಡಬೇಕಿಲ್ಲ, ನಾವು ಯಾವ ಪರಿಸ್ಥಿಯಲ್ಲಿ ಬದುಕುತ್ತಿದ್ದೇವೆ? ನಮ್ಮ ಹೆತ್ತವರು ತಮ್ಮ ರಕ್ತದ ಬೆವರು ಹರಿಸಿ ಯಾವ ರೀತಿ ನಮಗೆ ಕಲಿಸುತ್ತಿದ್ದಾರೆ? ಅನ್ನುವುದನ್ನು ನೆನಪಿಟ್ಟರೆ ಸಾಕು ಕೇವಲ ಶಾಲೆಯಲ್ಲಿ ಹೇಳಿಕೊಟ್ಟ ಪಾಠದಿಂದಲೇ ಅಂಕಗಳನ್ನು ಪಡೆಯಬಹುದು. ಟ್ಯೂಶನ್ ಕ್ಲಾಸ್‌ಗಳು ಚೈನಿ ಹೊಡೆಯುವ ಹಾಗೂ ಆಲಸ್ಯವಿರುವ ಮಕ್ಕಳಿಗಾಗಿ ಮಾತ್ರ’ ಅಂದಗ ನಾನು ಮೂಕನಾದೆ.

ನಾನಲ್ಲಿಂದ ಹೊರಟಾಗ ನನ್ನನ್ನು ರಿಕ್ಷಾದವರೆಗೆ ಬೀಳ್ಕೊಡಲು ಬಂದವ ಅಲ್ಲಿಯೂ ಮಾತನಾಡುತ್ತಿದ್ದ.

‘ಸರ್, ಅಕ್ಕಪಕ್ಕದ ಮಕ್ಕಳನ್ನು ನೋಡುವಾಗ ನನಗೂ ಕೆಲವೊಮ್ಮೆ ಮಂಪರು ಆವರಿಸುತ್ತದೆ’ ಅಂದ.

‘ಆಗ?’ ನಾನು ಕಾತರದಿಂದಲೇ ಕೇಳಿದೆ.

‘ಆಗ, ನಾನು...................ನಾನು ಕೇವಲ ನನ್ನ ತಾಯಿಯ ಕಣ್ಣುಗಳನ್ನು ನೆನೆಸಿಕೊಳ್ಳುತ್ತೇನೆ’.

‘ಅಂದರೆ?’.

‘ತುಂಬ ಕಷ್ಟಪಡುತ್ತಿದ್ದಳಾಕೆ,.......... ಕಾಗದದ ಕವರ್‌ಗಳನ್ನು ತಯಾರಿಸುತ್ತಿದ್ದಳು, ಗೋಂದು ಹಾಗೂ ಕತ್ತರಿಗಳನ್ನು ಹಿಡಿದು ನಾವೂ ಆಕೆಗೆ ಸಹಾಯ ಮಾಡುತ್ತಿದ್ದೆವು. ವನವಾಸ ಆರಂಭವಾಗಿದ್ದು ನನ್ನ ತಂದೆ ಕೆಲಸ ಮಾಡುತ್ತಿದ್ದ ಗಿರಣಿ ಮುಚ್ಚಿ ಹೋದಮೇಲೆ. ಕಡೆಕಡೆಗಂತೂ ಆಕೆ ಬಹಳ ಬೇಸತ್ತು, ನೊಂದು ಸಾವಿನ ಬಗ್ಗೆಯೇ ಮಾತನಾಡುತ್ತಿರುತ್ತಿದ್ದಳು. ಹೀಗೆ ಒಂದು ದಿನ ಮಾತನಾಡುತ್ತ,

‘ನಾನಿನ್ನು ಹೆಚ್ಚು ಬದುಕಲಾರೆ ಕಂದ, ಆದರೆ ಈ ನನ್ನ ಕಣ್ಣುಗಳು ಯಾವತ್ತೂ ನಿನ್ನ ಮೇಲಿರುತ್ತವೆ, ನೀನು ಹೇಗೆ ಓದುತ್ತಿ? ಹೇಗೆ ದೊಡ್ಡವನಾಗುತ್ತಿ? ಅನ್ನುವುದನ್ನು ನೋಡುತ್ತಿರುತ್ತೇನೆ’, ಅಂದಿದ್ದಳು. ಆದ್ದರಿಂದ ನನಗಾಕೆಯ ಕಣ್ಣುಗಳೇ ನೆನಪಾಗುತ್ತವೆ." ಅಂದ.

ಆಟೋರಿಕ್ಷದಲ್ಲಿ ಕುಳಿತಾಗ ಮನಸ್ಸು ಅಲ್ಲೋಲಕಲ್ಲೋಲವಾಯಿತು.

ಸತತವಾಗಿ ಯಾರಾದರೂ ಓದು, ಬೇಗ ಏಳು ಅನ್ನುವುದನ್ನು ಹೇಳುತ್ತಲೇಯಿರಬೇಕೆ? ಹೆತ್ತವರು ಎಷ್ಟು ಕಷ್ಟ ಪಡುತ್ತಾರೆ! ಅನ್ನುವುದನ್ನರಿಯುವ ಮಕ್ಕಳು ಒಬ್ಬರೋ ಇಬ್ಬರೋ ಅಷ್ಟೆ!

ಇತ್ತೀಚೆಗೆ ನಮ್ಮ ಕಾಲೇಜಿನ ಪ್ರಾಧ್ಯಾಪಕಿಯೊಬ್ಬರು ವಿಷಣ್ಣವದನರಾಗಿಯೇ ಸ್ಟಾಫ಼್ ರೂಮಿಗೆ ಬಂದು ಕುಳಿತರು.

‘ನನ್ನ ಮಗ ಬೇಗ ಏಳುವುದೇಯಿಲ್ಲ ನೋಡಿ, ನೋಡಿದಾಗಲೆಲ್ಲ ಬೆಳಗಿನ ಏಳರ ಎಕ್ಚರ್ ತಪ್ಪಿಸುತ್ತಾನೆ, ನನ್ನ ಮಾತೇ ಕೇಳುವುದಿಲ್ಲ, ಈಗೀಗಂತೂ ಕಲಿಯುವ ಆಸಕ್ತಿಯೇಯಿಲ್ಲ ಅನ್ನುತ್ತಿದ್ದಾನೆ’ ಆನುವ ತಮ್ಮ ಅಳಲನ್ನು ನನ್ನಲ್ಲಿ ತೋಡಿಕೊಂಡರು. ಅವರನ್ನು ನೋಡಿದಾಗ ಅವರು ಈಗಲೋ ಆಗಲೋ ಅಳುವ ಪರಿಸ್ಥಿತಿಯಲ್ಲಿದ್ದರು.

ಕಷ್ಟ ಪಟ್ಟು ತಮ್ಮ ಜೀವನವನ್ನು ಸುಂದರವಾಗಿಸುವ ಕಾಲ ಮುಗಿದ ಮೇಲೆಯೇ ಅನೇಕ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳುತ್ತಾರೆ. ಆದರೆ ಕಾಲ ಸರಿದ ಮೇಲೆ ಉಳಿಯುವುದು ಬರೀ ಕತ್ತಲು ಅನ್ನುವುದನ್ನವರು ಅರಿಯುವುದು ಯಾವಾಗ?

ಬೆಳಿಗ್ಗೆ ಏಳಲು ಒತ್ತಾಯ, ಕಾಲೇಜಿಗೆ ಹೋಗಲು ಒತ್ತಾಯ, ಪ್ರತಿಯೊಂದಕ್ಕೂ ಒತ್ತಾಯ! ಒತ್ತಾಯದಿಂದ ಹೂ ಅರಳುತ್ತದೆಯೆ? ನಿರ್ಧಾರದ ಕಿಡಿಯನ್ನು ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲೇ ಹೊತ್ತಿಸಬೇಕಲ್ಲವೆ? ಹೊರಗಿನ ಒತ್ತಾಯದಿಂದ ಮೊಟ್ಟೆ ಒಡೆಯುತ್ತದೆ ಆದರೆ ಅದೇ ಒತ್ತಾಯ ಒಳಗಿನಿಂದ ಬಂದರೆ ಹೊಸ ಜೀವನಕ್ಕದು ನಾಂದಿಯಾಗುತ್ತದೆ.

ತಂದೆ ತಾಯಂದಿರ ಕಣ್ಣು ನೆನಪಾಗಲು ಅವರು ಸಾಯಲೇಬೇಕೆಂದಿದೆಯೆ?

ಕ್ಲಾಸಿನಲ್ಲಿ ಗೂಂಡಾಗಿರಿ ಮಾಡುವಾಗ, ಅಥವಾ ಸಮಯ ಹಾಳು ಮಾಡುವಾಗ, ಎಂಟ್ರನ್ಸ್ ಪರೀಕ್ಷೆಯಲ್ಲಿ ಸೊನ್ನೆ ಪಡೆಯುವಾಗ, ಚರ್ಚಗೇಟಿನಿಂದ ಲೋಕಲ್ ಟ್ರೇನಿನ ನೂಕುನುಗ್ಗಲಿನಲ್ಲಿ ಜೋತಾಡುತ್ತ ಒದ್ದಾಡುತ್ತ ಬರುವ ತಾಯಿ ನೆನಪಾಗುವುದಿಲ್ಲವೆ? ಮಕ್ಕಳಿಗಾಗಿ ಹಣ ಗಳಿಸಲು ಮದ್ರಾಸ್, ಕಲ್ಕತ್ತಾ, ಹೈದ್ರಾಬಾದ್ ಅಂತ ಕಂಪನಿಯ ಕೆಲಸಕ್ಕಾಗಿ ತಿರುಗಾಡಿ ಸುಸ್ತಾಗುವ ತಂದೆ ನೆನಪಾಗುವುದಿಲ್ಲವೆ?

ಮನೆಯಲ್ಲಿ ವಯಸ್ಸಿನಲ್ಲಿ ನಾವು ಚಿಕ್ಕವರಿರಬಹುದು ಆದರೆ ಬುದ್ಧಿಯಿಂದ ನಾವು ಜಾಣರಾದರೆ ಹೆತ್ತವರ ಬೆವರೂ ಪರಿಮಳ ಸೂಸಬಹುದು, ಯಶಸ್ಸಿನ ರೈಸ್ ಪ್ಲೇಟ್ ರೆಡಿಮೇಡ್ ಸಿಗುವುದಿಲ್ಲ ಅನ್ನುವುದು ಇದೇ ವಯಸ್ಸಿನಲ್ಲಿ ಗೊತ್ತಾಗಬೇಕು. ಯಶಸ್ಸು ಬೇಯಿಸಿಡಬೇಕಾಗುತ್ತದೆ. ಕೆಲವೊಮ್ಮೆ ಮಹತ್ವಾಕಾಂಕ್ಷೆಯ ಇಂಧನ ಬಳಸಿ ಜೀವನವನ್ನು ಕಾಯಿಸಿಡಬೇಕಾಗುತ್ತದೆ ಅನ್ನುವುದನ್ನು ತಿಳಿಯುವುದ್ಯಾವಾಗ? ನಾಲವತ್ತನೆಯ ವಯಸ್ಸಿನಲ್ಲಿಯೆ?

ಹತ್ತನೆಯ ತರಗತಿಯಲ್ಲಿದ್ದಾಗ ಪರೀಕ್ಷೆಯ ಫ಼ಾರಂ ತುಂಬಲು ನನ್ನಲ್ಲಿ ಹಣವಿರಲಿಲ್ಲ ಅನ್ನುವ ಸಂಗತಿ ನೆನಪಾಯಿತು. ತಾಯಿಯ ಕೈಯಲ್ಲಿದ್ದ ಕೊನೆಯ ಚಿನ್ನದ ಬಳೆಯನ್ನು ಮಾರಲು ಹೊರಟ ತಂದೆ ನೆನಪಾದರು. (ಆ ಬಳೆ ಮತ್ತೆ ಯಾವತ್ತೂ ಮರಳಿ ಬರಲಾರದು ಎಂದು ಗೊತ್ತಿದ್ದರೂ)

‘ಇದು ಕೊನೆಯ ಬಳೆ, ಮುಂದೇನು?’ ಅಂದಿದ್ದಳು ಅಮ್ಮ.

ಮನೆಯ ಆ ಕ್ಷಣಗಳು ಇಂದಿಗೂ ನೆನಪಾಗುತ್ತವೆ, ನೆಂಟರಿಷ್ಟರು ಮಾಡಿದ ಉಪೇಕ್ಷೆ, ಬರಿಗೈಯಲ್ಲಿ ದಿನ ದೂಡುತ್ತಿದ್ದ ತಾಯಿಯನ್ನು ಎಲ್ಲ ಕ್ಷೇತ್ರದಿಂದಲೂ ದೂರವಿಟ್ಟ ನೆಂಟರು ನೆನಪಾಗುತ್ತಾರೆ. ಒಂದು ದಿನ ಯಾರದ್ದೋ ಮದುವೆಯಲ್ಲಿ ನಾನಾಕೆಗೆ,

‘ಅಮ್ಮ, ನನ್ನ ಸರ ಹಾಕಿಕೋ, ಬರೀ ಕರಿಮಣಿಯಲ್ಲಿ ಚನ್ನಾಗಿರೋಲ್ಲ’, ಅಂದದಕ್ಕೆ ಅಮ್ಮ ಧೃಡ ನಿರ್ಧಾರದಿಂದ,

‘ನನ್ನ ಜೊತೆ ಬರೋಕ್ಕೆ ನಾಚಿಕೆ ಅನಿಸಿದರೆ ನಾನು ಬರೋದೇಯಿಲ್ಲ, ಬರೋದಾದ್ರೆ ಹೀಗೇ ಬರ್ತಿನಿ’. ಎಂದು ಹೇಳಿದ್ದ ಅಮ್ಮ ನೆನಪಾದಳು. ಕಡೆಗೊಂದು ದಿನ,

‘ನನ್ನ ಒಡವೆ ನೋಡಬೇಕಿದ್ದರೆ ನನ್ನ ಮಗನನ್ನು ನೋಡಿ’ ಅಂದಿದ್ದ ಆಕೆಯ ಆ ಮಾತು ನನಗೆಷ್ಟೊಂದು ಜವಾಬ್ದಾರಿ ಹೊರಿಸಿತ್ತು, ಆನ್ನುವುದು ನೆನಪಾಗುತ್ತದೆ.

ಇಂತಹ ಕ್ಷಣಗಳೇ ಕಷ್ಟಪಟ್ಟು ಕಲಿಯುವ ಮಕ್ಕಳ ಜೀವನಕ್ಕೆ ದಾರಿದೀಪವಾಗುತ್ತವೆ. ದಾರಿದ್ರ್ಯ ಅಥವಾ ಬಡತನ ಮನುಷ್ಯನ ಜೀವನವನ್ನು ಮುಗಿಸಲಾರದು, ಆದರೆ ಆಲಸ್ಯ, ಉದಾಸೀನತೆ, ಗುರಿಯಿಲ್ಲದ ಬದುಕು ಆತನನ್ನು ಸರ್ವನಾಶಮಾಡಿಬಿಡುತ್ತದೆ. ನನಗೆ ಕೊಟ್ಟ ಸಂದರ್ಶನವೊಂದರಲ್ಲಿ ಆಶಾಭೋಸಲೆಯವರು ಹೇಳಿದ ವಾಕ್ಯ ನನಗೆ ನೆನಪಾಗುತ್ತಿದೆ,

‘ಸುಖದ ಸುಪ್ಪತ್ತಿಗೆಯ ಮೇಲೆ ಹೊರಳಾಡುವ ಜನ ಯಾವತ್ತೂ ಕಲಾವಂತರಾಗಲು ಸಾಧ್ಯವಿಲ್ಲ’ ಅಂದಿದ್ದರು.

ನಾವು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ನಮಗಾಗಿ ಅಪಾರ ಕಷ್ಟಪಡುವ, ನಾವು ಹೆಸರು ಗಳಿಸಲೆಂದು ಅಪಾರ ನಂಬಿಕೆಯಿಂದ ನಮ್ಮನ್ನು ಹೊರ ಜಗತ್ತಿಗೆ ಕಳಿಸುವ, ನಮಗಾಗಿ ಕನಸು ಕಾಣುವ ತಾಯಿಯ ಕಣ್ಣು! ಆ ನಮ್ಮ ತಾಯಿಯ ಕಣ್ಣು ನಮಗೆ ನೆನಪಾದಾಗಲೇ ಸಾಕಷ್ಟು ಪ್ರೇರಣೆ ಕೊಡುವ ಜೀವನ ರೂಪುಗೊಳ್ಳುತ್ತದೆ.

14 comments:

  1. ಬ್ಲಾಗ್ ಲೋಕಕ್ಕೆ ಸ್ವಾಗತ ಅಕ್ಷತಾ.. ಬ್ಲಾಗಿನ ನಿಮ್ಮ ಮೊದಲ ಲೇಖನವೇ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಇನ್ನೂ ಹೆಚ್ಚು ಹೆಚ್ಚು ಲೇಖನಗಳು ನಿಮ್ಮಿಂದ ಹೊರಹೊಮ್ಮಲಿ..:-)

    ReplyDelete
  2. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ ಜಯಾ. ಇನ್ನೂ ಹೆಚ್ಚೆಚ್ಚು ಒಳ್ಳೆಯ ಲೇಖನಗಳನ್ನು ಅನುವಾದಿಸಿ ಬರೆಯುವಾಸೆ, ಆದಷ್ಟು ಬೇಗ ಅದನ್ನು ಪೂರ್ಣಗೊಳೊಸುವೆ.

    ReplyDelete
  3. ಅಕ್ಷತಾ ಅವರೆ ನಿಮ್ಮ ಅನುವಾದಿತ ಬರಹಗಳು ಕಾಡುತ್ತವೆ .ಹಾಗೆಯೇ ಅನುವಾದಿತದ ಹೊರತಾಗಿ ನಿಮ್ಮ ತುಡಿತ ,ತಲ್ಲಣ ,ಅಸೆ ,ಕಾಳಗಿ ,ಕನಸು ....ನಿಮ್ಮದೇ ಬರಹಗಳ ನಿರೀಕ್ಷೆಯಲ್ಲಿರುವೆ .ಮನೆ ಮಂದಿಗೆ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುವೆ -ನಾಗತಿಹಳ್ಳಿ ರಮೇಶ
    http://avvanni.wordpress.com/

    ReplyDelete
  4. ತುಂಬ ತುಂಬ ಧನ್ಯವಾದಗಳು ರಮೇಶ್ ಅವರೆ, ಇಂತಹ ಪ್ರೋತ್ಸಾಹನೆಯ ನುಡಿಗಳೇ ಮುಂದಿನ ಹೆಜ್ಜೆಯಿಡಲು ಧೈರ್ಯ ಕೊಡುತ್ತವೆ. ನಾನು ಅನುವಾದಿಸಿರುವ ‘ಹೀಗೊಬ್ಬಬಿಲ್ಡರ್’ ಒಬ್ಬ ಬಿಲ್ಡರ್‌ನ ಆತ್ಮಕಥೆ ಮರಾಠಿಯಿಂದ ಕನ್ನಡಕ್ಕೆ ಮುಂದಿನ ತಿಂಗಳು ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗಿತ್ತಿದೆ.
    ಅಕ್ಷತಾ.

    ReplyDelete
  5. ಆಹಾ , ಓದಲು ಇನ್ನೊಂದು ಬ್ಲಾಗ್ ಸಿಕ್ಕಿತು , ಖುಷಿಯಾಯ್ತು ಅಕ್ಷತಾ . ಎಂದಿನಂತೆ ಸುಲಲಿತವಾಗಿ ಓದಿಸಿಕೊಳ್ಳುವ ಬರಹ. मी तुला एक सांगू का ? ಅಕ್ಷರ ಇನ್ನಷ್ಟು ದೊಡ್ಡದಾಗಿದ್ದರೆ ನಮಗನುಕೂಲ.:)

    ReplyDelete
  6. ಅಕ್ಷತ
    ಬ್ಲಾಗ್ ಲೋಕಕ್ಕೆ ಸ್ವಾಗತ
    ಒಂದು ಸುಂದರ, ಭಾವಪೂರ್ಣ ಲೇಖನದೊಂದಿಗೆ ಹೆಜ್ಜೆ ಇಟ್ಟಿದ್ದಿರಾ
    ನಿಮಗೆ ಶುಭವಾಗಲಿ
    ನಿಮ್ಮ ಲೇಖನದ ಭಾಷೆ ಸೊಗಸಾಗಿದೆ
    ಹೀಗೆಯೇ ಬರೆಯುತ್ತಿರಿ
    ಬರುತ್ತಿರುವೆ

    ReplyDelete
  7. ಧನ್ಯವಾದ ಅಹಲ್ಯಾ. ಮುಂದಿನ ಸಲ ಫ಼ಾಂಟನ್ನ ಇನ್ನಷ್ಟು ದೊಡ್ಡದಾಗಿಟ್ಟುಕೊಳ್ಳುತ್ತೇನೆ. ಸಣ್ಣ ಬರಹ ಓದಿ ಚಷ್ಮಾ ಬರಲಿಲ್ಲ ತಾನೆ?
    ಅಕ್ಶತಾ.

    ReplyDelete
  8. ತುಂಬಾ ಧನ್ಯವಾದ ಡಾ.ಗುರುಮೂರ್ತಿ ಅವರೆ. ನಿಮ್ಮೆಲ್ಲರ ಸ್ಪೂರ್ತಿ ಮಾತುಗಳು ನನ್ನನ್ನು ಕೈಹಿಡಿದು ಮುಂದೆ ನಡೆಸಲಿ.
    ಅಕ್ಷತಾ.

    ReplyDelete
  9. ಅಕ್ಷತಾ...

    ತುಂಬಾ ಸೊಗಸಾಗಿ ಬರೆದಿದ್ದೀರಿ...
    ಅರ್ಥಪೂರ್ಣವಾಗಿದೆ...
    ಸಕಾಲಿಕವಾಗಿದೆ..

    ಹಸಿವು...
    ಇರಬೇಕು...
    ಅದು ಬೆಳವಣಿಗೆಯ..
    ಪ್ರಗತಿಯ ಸೂಚನೆ... ಅಲ್ಲವಾ?

    ಚಂದದ ಬರಹಕ್ಕೆ ಅಭಿನಂದನೆಗಳು...

    ReplyDelete
  10. ತುಂಬ ಥ್ಯಾಂಕ್ಸ ಸರ್, ಎಲ್ಲರ ಅಭಿನಂದನೆಗಳಿಂದ ಉತ್ಸಾಹ ಹಾಗೂ ಕಾರ್ಯಕ್ಷಮತೆ ಹೆಚ್ಚುತ್ತಿದೆ.
    ಅಕ್ಷತಾ.

    ReplyDelete
  11. ಮೊದಲನೇ ಭಾಗವನ್ನೂ ಓದಿದೆ.ಚೆನ್ನಾಗಿದೆ.ಮುಂದುವರೆಸಿ....

    ReplyDelete
  12. ಥ್ಯಾಂಕ್ಸ್ ಗೌತಮ್ ಅವರೆ, ಅದರ ಎರಡನೆಯ ಭಾಗವನ್ನೂ ಒಟ್ಟಿಗೆ ಸೇರಿಸಿದ್ದೇನೆ. ಅಕ್ಷತಾ.

    ReplyDelete
  13. >>‘ನನ್ನ ಒಡವೆ ನೋಡಬೇಕಿದ್ದರೆ ನನ್ನ ಮಗನನ್ನು ನೋಡಿ’ ಅಂದಿದ್ದ ಆಕೆಯ ಆ ಮಾತು ನನಗೆಷ್ಟೊಂದು ಜವಾಬ್ದಾರಿ ಹೊರಿಸಿತ್ತು, ಆನ್ನುವುದು ನೆನಪಾಗುತ್ತದೆ<< superb!
    - naasO

    ReplyDelete
  14. ತುಂಬ ಥ್ಯಾಂಕ್ಸ್ ಸರ್, ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳು ಹೀಗೆ ಬೆಳೆಯ ಬೇಕು ಅನ್ನುವಾಸೆ ಹೂತ್ತುಕೊಂಡೇ ಬದುಕುತ್ತಾಳೆ. ಅವಳಿಚ್ಛೆಯಂತೆ ಅವರು ಬೆಳೆದು ದೊಡ್ಡವರಾದರೆ ಅವಳು ಧನ್ಯಳು. ಓದಿ ಪ್ರತಿಕ್ರಿಯಿಸಿದ್ದಾಕೆ ಮತ್ತೊಮ್ಮೆ ಧನ್ಯವಾದಗಳು.
    ಅಕ್ಷತ.

    ReplyDelete